ಮೈಸೂರು, ಏ.20-ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿಯವರ ಗಿಮಿಕ್ ಇಲ್ಲಿ ನಡೆಯುವುದಿಲ್ಲ. ಉತ್ತಮ ಆಡಳಿತ ನೀಡಿರುವ ನಮ್ಮ ಸರ್ಕಾರ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಮೈಸೂರಿನ ಪ್ರೆಸ್ಕ್ಲಬ್ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಸ್ಪಂದನೆ ಗಮನಿಸಿದರೆ ಕಾಂಗ್ರೆಸ್ಗೆ ಸ್ಪಷ್ಟ ಬೆಂಬಲವಿರುವುದು ಗೊತ್ತಾಗುತ್ತದೆ.
ಈ ಚುನಾವಣೆಯಲ್ಲಿ ಅಭಿವೃದ್ಧಿ ಮತ್ತು ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದ್ದೇವೆ. ನಮ್ಮ ಪ್ರಭುತ್ವಕ್ಕೆ ಆಡಳಿತ ವಿರೋಧಿ ಅಲೆ ಇಲ್ಲ. ಈ ಹಿಂದೆ ಇದೇ ರೀತಿ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪ್ರಚಾರ ಮಾಡಿದ್ದೆವು. ಅದು ಯಶಸ್ವಿಯಾಯಿತು. ಬಿಜೆಪಿಯವರು ಏನೇ ಅಪಪ್ರಚಾರ ಮಾಡಿದರೂ ಜನತೆ ನಮ್ಮ ಕೈ ಬಿಡಲಿಲ್ಲ ಎಂದು ಹೇಳಿದರು.
ಈಗ ನಾವು ಏನು ಮಾಡಿದ್ದೇವೆ, ಮುಂದೆ ಏನು ಮಾಡಬೇಕೆಂಬುದನ್ನು ಜನರ ಮುಂದೆ ಇಟ್ಟಿದ್ದೇವೆ. ಕೇಂದ್ರ ಸರ್ಕಾರ ದೇಶದ ಆರ್ಥಿಕ ಸುಧಾರಣೆಗಾಗಿ ನೋಟು ಅಮಾನೀಕರಣ ಮಾಡಿಲ್ಲ, ಅದು ಒಂದು ರಾಜಕೀಯ ಗಿಮಿಕ್ ಎಂದು ಟೀಕಿಸಿದರು.
ನೋಟು ಅಮಾನೀಕರಣಗೊಂಡು ಒಂದೂವರೆ ವರ್ಷ ಆಗಿದೆ. ಆದರೂ ಕೂಡ ನೋಟಿನ ಅಭಾವ ಕಂಡು ಬರುತ್ತಿದೆ. ಇದರಲ್ಲೇ ಇದು ಗಿಮಿಕ್ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು. ನನ್ನ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಆ ಆರೋಪಕ್ಕೆ ಆಧಾರ ಏನಿದೆ. ಆಧಾರ ರಹಿತ ಆರೋಪ ಮಾಡುವುದು ಪ್ರಧಾನಿ ಹುದ್ದೆಯಲ್ಲಿರುವವರಿಗೆ ಶೋಭೆ ತರುವುದಿಲ್ಲ. ಅದೆಲ್ಲವನ್ನು ಮೀರಿ ನಾವು ಅಭಿವೃದ್ಧಿ ಮಾಡಿದ್ದೇವೆ. ನಮ್ಮ ಅಭಿವೃದ್ಧಿ ಮುಂದೆ, ಬಿಜೆಪಿಯ ಅಭಿವೃದ್ಧಿ ಮಾತ್ರ ಏನೂ ಇಲ್ಲ ಎಂದು ಹೇಳಿದರು.
ಮೋದಿ, ಷಾ ಯಾರೂ ಗೆಲ್ಲಲ್ಲ:
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಯಾರೇ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಬಂದರೂ ಬಿಜೆಪಿ ಗೆಲ್ಲುವುದಿಲ್ಲ. ಏನಿದ್ದರೂ ಗೆಲುವು ನಮ್ಮದೇ ಎಂದು ಸಿದ್ದರಾಮಯ್ಯ ತಿಳಿಸಿದರು.
ನಾಳೆ ನಿರ್ಧಾರ:
ಬಾದಾಮಿ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವ ಬಗ್ಗೆ ನಾಳೆ ಬೆಳಿಗ್ಗೆ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಈಗಲೂ ಕೂಡ ಬಾಗಲಕೋಟೆ, ಬಿಜಾಪುರ ಜನರು ಸೇರಿದಂತೆ ಎಸ್.ಆರ್.ಪಾಟೀಲ್, ತಿಮ್ಮಾಪುರ್, ಎಂ.ಬಿ.ಪಾಟೀಲ್ ಮತ್ತಿತರರು ಒತ್ತಾಯ ಮಾಡುತ್ತಿದ್ದಾರೆ. ಆದರೆ ಅವರಿಗೆಲ್ಲ ನಾನು ಚಾಮುಂಡೇಶ್ವರಿ ಕ್ಷೇತ್ರವೊಂದರಲ್ಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೇನೆ. ಆದರೂ ನನ್ನ ನಿರ್ಧಾರವನ್ನು ನಾಳೆ ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಎರಡು ಕ್ಷೇತ್ರದಲ್ಲಿ ಗೆದ್ದರೆ ಯಾವ ಕ್ಷೇತ್ರವನ್ನು ಬಿಟ್ಟುಕೊಡುತ್ತೀರಾ ಎಂಬ ವರದಿಗಾರರ ಪ್ರಶ್ನೆಗೆ ಎರಡರಲ್ಲೂ ನನ್ನ ಗೆಲುವು ಖಚಿತ. ಫಲಿತಾಂಶದ ನಂತರ ತೀರ್ಮಾನ ತಿಳಿಸುತ್ತೇನೆ ಎಂದು ಉತ್ತರಿಸಿದರು.
ಕುಟುಂಬ ರಾಜಕಾರಣವನ್ನು ವಿರೋಧಿಸುವ ನೀವು, ನಿಮ್ಮ ಮಗನಿಗೆ ಏಕೆ ಟಿಕೆಟ್ ಕೊಡಿಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ನಾನು ಈಗಲೂ ಕುಟುಂಬ ರಾಜಕಾರಣ ವಿರೋಧಿಸುತ್ತೇನೆ. ರಾಕೇಶ್ ಅಕಾಲಿಕ ಮರಣಕ್ಕೆ ತುತ್ತಾಗದಿದ್ದರೆ ರಾಜಕೀಯಕ್ಕೆ ಬರುತ್ತಿದ್ದ. ಅವನು ನಿಧನ ಹೊಂದಿದ್ದರಿಂದ ವರುಣ ಕ್ಷೇತ್ರದ ಅಭಿವೃದ್ಧಿಗಾಗಿ ಯತೀಂದ್ರನನ್ನು ಕಳುಹಿಸಿದ್ದೆ. ಅಲ್ಲಿ ಅವನು ಉತ್ತಮ ಕೆಲಸ ಮಾಡಿದ್ದಾನೆ. ಹಾಗಾಗಿ ಅಲ್ಲಿನ ಜನ ಅಲ್ಲಿಂದಲೇ ಕಣಕ್ಕಿಳಿಯಬೇಕೆಂದು ಒತ್ತಾಯಿಸಿದ್ದರಿಂದ ಚುನಾವಣಾ ಕಣಕ್ಕಿಳಿದಿದ್ದಾನೆ ಎಂದು ಸ್ಪಷ್ಟಪಡಿಸಿದರು.
ಎಚ್.ಡಿ.ದೇವೇಗೌಡರಿಗಾಗಲೀ, ಬಿ.ಎಸ್.ಯಡಿಯೂರಪ್ಪ ನವರಿಗಾಗಲೀ ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕಾರಿಗೆ ಅಪಘಾತವಾದರೆ ಅದನ್ನು ರಾಜ್ಯ ಸರ್ಕಾರದ ಮೇಲೆ ಹಾಕುತ್ತಾರೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ. ಮುಂದಿನ ದಿನದಲ್ಲಿ ಬಿಜೆಪಿಯವರು ಮೂರ್ಖರಾಗುತ್ತಾರೆ ಎಂದು ಟಾಂಗ್ ನೀಡಿದರು.
ಬಿಜೆಪಿಯವರಿಗೆ ಯಾವುದೇ ರೀತಿಯ ಅಜೆಂಡಾ ಇಲ್ಲ. ನಾವು ಅಜೆಂಡಾ ಇಟ್ಟುಕೊಂಡು ಪ್ರಚಾರ ಮಾಡಿದ್ದೇವೆ. ಕಳೆದ ಚುನಾವಣೆ ವೇಳೆ ನೀಡಿದ್ದ 165 ಭರವಸೆಗಳನ್ನು ಈಡೇರಿಸಿಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಹೇಳಿದರು.
ಬಿಜೆಪಿಯ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಬಂದು ಹೋದರು. ಆದರೆ ನಾವು ಐದು ವರ್ಷ ಕಾಲ ಸ್ಥಿರ,ಸ್ವಚ್ಛ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನಮ್ಮ ಆಡಳಿತದ ಅವಧಿಯಲ್ಲಿ ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ. ಕೆಲ ಸಚಿವರು, ಶಾಸಕರ ವಿರುದ್ಧ ಆರೋಪ ಹೊರತುಪಡಿಸಿದರೆ ಸರ್ಕಾರ ಉತ್ತಮವಾಗಿ ಆಡಳಿತ ನಡೆಸಿದೆ ಎಂದು ಸಿಎಂ ಹೇಳಿದರು.
ನನ್ನನ್ನು ಅಮಿತ್ಷಾ ಅವರು ಹಿಂದೂ ವಿರೋಧಿ ಎಂದು ಹೇಳುತ್ತಾರೆ. ನಾನು ಹಿಂದು ಅಪ್ಪಟ ಹಿಂದು. ಮೊದಲು ಅವರು ಹಿಂದೂನಾ ಎಂಬುದನ್ನು ಸ್ಪಷ್ಟಪಡಿಸಲಿ, ತಾವು ಜೈನನಲ್ಲ ಎಂದು ಘಂಟಾಘೋಷವಾಗಿ ಷಾ ಅವರು ಹೇಳುತ್ತಾರಾ ಎಂದು ಸವಾಲು ಹಾಕಿದರು.
ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಸೋಲಿಸುತ್ತೇನೆ ಎನ್ನುತ್ತಾರೆ. ಅವರ ಕೈಯಲ್ಲಿ ಸೋಲಿಸುವುದಕ್ಕೆ ಆಗುವುದಿಲ್ಲ. ಬೇರೆ ಪಕ್ಷದವರೂ ನನ್ನನ್ನು ಸೋಲಿಸುತ್ತೇನೆ ಎನ್ನುತ್ತಾರೆ. ಆದರೆ ಎಲ್ಲಾ ಮತಗಳೇನು ಅವರ ಜೇಬಿನಲ್ಲಿವೆಯೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ದಕ್ಷಿಣ ಕನ್ನಡದಲ್ಲಿ 23 ಮಂದಿ ಸಾವನ್ನಪ್ಪಿದರೆ ಅವರನ್ನೆಲ್ಲ ಬಿಜೆಪಿ ಕಾರ್ಯಕರ್ತರು ಎಂದು ಹೇಳುತ್ತಾರೆ. ಆದರೆ ಈ ಪೈಕಿ ನಿಖರವಾಗಿ 12 ಮಂದಿ ಬಿಜೆಪಿಯವರು ಉಳಿದ 11 ಮಂದಿ ಕಾಂಗ್ರೆಸ್ ಹಾಗೂ ಇತರರು. ಪರಿಸ್ಥಿತಿ ಹೀಗಿದ್ದರೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳುತ್ತಾರೆ.
ಉತ್ತರ ಪ್ರದೇಶದಲ್ಲಿ ಅಪರಾಧಗಳು ನಡೆಯುತ್ತಲೇ ಇವೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಮ್ಮ ಸರ್ಕಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವ ತನ್ವೀರ್ಸೇಠ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಂದ್ರ, ಉಪಾಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನಕಾರ್ಯದರ್ಶಿ ಲೋಕೇಶ್ಬಾಬು ಉಪಸ್ಥಿತರಿದ್ದರು.