ಬೆಂಗಳೂರು,ಏ.20- ಬಿಜೆಪಿ ಪ್ರಜಾಪ್ರಭುತ್ವವನ್ನು ಗೌರವಿಸದೆ, ಮತೀಯ ದ್ವೇಷವನ್ನು ಬಿತ್ತುತ್ತಿದ್ದು , ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ನಟ ಪ್ರಕಾಶ್ ರೈ ಆರೋಪಿಸಿದರು.
ಪ್ರೆಸ್ಕ್ಲಬ್ನಲ್ಲಿಂದು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಮುಖವಾಣಿಯಲ್ಲ, ಸದಸ್ಯನೂ ಅಲ್ಲ .ದೇಶದ ಸಾಮಾನ್ಯ ಪ್ರಜೆ. ದೇಶದ ಒಳತಿಗಾಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದೇನೆ. ನನ್ನ ನಂತರ ಬಹಳಷ್ಟು ಜನ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ.
ನಾನು ಕಮ್ಯೂನಿಸ್ಟ್ ಸಿದ್ದಾಂತ ಗೌರವಿಸುತ್ತೇನೆ. ಬಿಜೆಪಿಯವರು 3-4 ವರ್ಷಗಳಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ. ಅಧಿಕಾರಕ್ಕೆ ಬಂದ ನಂತರ ಅವರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಅಲ್ಪಸಂಖ್ಯಾತರನ್ನು ಆತಂಕಕ್ಕೆ ದೂಡುತ್ತಿದ್ದಾರೆ. ವಿಪಕ್ಷಗಳನ್ನು ಮುಕ್ತ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಬಿಜೆಪಿಯಿಂದ ದೇಶಕ್ಕೆ ಅಪಾಯ ಎಂದು ಹೇಳಿದರು.
ಜಸ್ಟ್ ಆಸ್ಕಿಂಗ್ ಎಂಬುದು ರಾಜಕೀಯೇತರ ಸಂಘಟನೆ. ಈ ಹಿಂದೆ ಕೂಡ ರಾಜಕೀಯ ಪ್ರವೇಶಿಸುವ ಉದ್ದೇಶ ತಾವು ಹೊಂದಿರಲಿಲ್ಲ ಎಂದ ಅವರು, ಈ ಹಿಂದೆ ಯಾವುದೇ ಸಮಸ್ಯೆ ಎದುರಾದಾಗ ದೇಶದ ನಾನಾ ಮೂಲಗಳಿಂದ ಪ್ರತಿಕ್ರಿಯೆಗಳು ಬರುತ್ತಿದ್ದವು. ಈಗ ಅಂತಹ ವಾತಾವರಣ ಇಲ್ಲ.ಹಾಗಾಗಿ ಪ್ರಾದೇಶಿಕವಾಗಿ ಸೀಮಿತವಾಗಿರು ಪ್ರಶ್ನೆಗಳನ್ನು ರಾಜ್ಯವ್ಯಾಪಿ ಪ್ರಶ್ನಿಸುವ ಪರಿಪಾಠ ಬೆಳೆಸುವ ಸಲುವಾಗಿ ಜಸ್ಟ್ ಆಸ್ಕಿಂಗ್ ಫೌಂಡೇಷನ್ ಆರಂಭಿಸಲಾಗಿದೆ ಎಂದು ವಿವರಿಸಿದರು.
ಈ ಫೌಂಡೇಷನ್ ಜನರಿಗಾಗಿ, ಜನರಿಗೋಸ್ಕರ ಕೆಲಸ ಮಾಡಲಿದೆ.ಇದು ಪ್ರತಿಯೊಂದು ಸಮಸ್ಯೆಗೂ ಪ್ರತಿಕ್ರಿಯಿಸಲಿದೆ. ಮುಂದಿನ ದಿನಗಳಲ್ಲಿ ಫೌಂಡೇಷನ್ನ ಜಿಲ್ಲಾ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಕಾವೇರಿ ವಿವಾದ ಏಕಕಾಲಕ್ಕೆ ಬಗೆಹರಿಸುವ ಸಮಸ್ಯೆಯಾಗಿಲ್ಲ. ಅದಕ್ಕೆ ನಾನಾ ರೀತಿಯ ಸ್ವರೂಪ ನೀಡಲಾಗಿದೆ. ಭಾಷಾ ಸೌಹಾರ್ದತೆಗೂ ಧಕ್ಕೆ ತರಲಾಗಿದೆ. ಕಾವೇರಿ ಮಂಡಳಿ ರಚನೆ ವಿಷಯದಲ್ಲಿ ಕೇಂದ್ರ ಸರ್ಕಾರ ನಾಟಕವಾಡುತ್ತಿದೆ. ಹಾಗಾಗಿ ಕಾವೇರಿ ವಿಷಯ ಒಂದೇ ಕಾಲಕ್ಕೆ ಬಗೆಹರಿಯದಿರುವುದರಿಂದ ತಜ್ಞರೊಂದಿಗೆ ನಿರಂತರ ಚರ್ಚೆ ಮಾಡಿ ಬಗೆಹರಿಸಬೇಕಿದೆ ಎಂದು ಹೇಳಿದರು.
ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಅವರೊಂದಿಗೆ ನಾನು ದೇವೇಗೌಡರನ್ನು ಭೇಟಿಯಾಗಿದ್ದೆ. ಜಾತ್ಯಾತೀತ ಎನ್ನುವ ಜೆಡಿಎಸ್ ಮುಂದೆ ಬಿಜೆಪಿಯೊಂದಿಗೆ ಕೈ ಜೋಡಿಸಲಿದೆ ಎಂಬ ವದಂತಿ ಇದ್ದವು. ಅದನ್ನು ಬಗೆಹರಿಸಿಕೊಳ್ಳಲು ಅವರ ಭೇಟಿ ಮಾಡಿದ್ದೆ. ದೇವೇಗೌಡರೊಂದಿಗೆ ಮಾತನಾಡಿದ ಬಳಿಕ ಈ ವದಂತಿ ಸುಳ್ಳು ಎಂಬುದು ತಿಳಿಯಿತು.
ಕೆ.ಸಿ.ಚಂದ್ರಶೇಖರ್ ಸಹ ಒಳ್ಳೆಯ ಕೆಲಸ ಮಾಡಿದ್ದಾರೆ. ದೇಶದ ವಿಷಯದಲ್ಲಿ ನನ್ನ ಮತ್ತು ಅವರ ಆಲೋಚನೆ ತಾಳೆಯಾಗುತ್ತಿದೆ ಎಂದರು.