ಕರಾಚಿ, ಏ.20-ಪಾಕಿಸ್ತಾನಿ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪಾಕ್ ಮತ್ತು ಹಿಂದಿ ಚಿತ್ರರಂಗದ ನಟಿ ಮತ್ತು ಗಾಯಕಿ ಮೀಶಾ ಶಫಿ ಅವರಿಗೆ ಪಾಕ್ ಮತ್ತು ಹಾಲಿವುಡ್ ನಟ ಮತ್ತು ಗಾಯಕ ಅಲಿ ಜಾಫರ್ ಲೈಂಗಿಕ ಕಿರುಕುಳ ನೀಡಿದರೆನ್ನಲಾದ ಘಟನೆ ಈಗ ವಿವಾದದ ಸ್ವರೂಪ ಪಡೆಯುತ್ತಿದೆ.
ಅಲಿ ಜಾಫರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಮೌನವಾಗಿರುವ ಸಂಸ್ಕøತಿಯನ್ನು ಮುರಿಯುವುದು ಈ ಸನ್ನಿವೇಶದಲ್ಲಿ ತುಂಬಾ ಮುಖ್ಯವೆಂದು ನನಗೆ ಅನ್ನಿಸಿದೆ ಎಂದು ಮೀಶಾ ಟ್ವೀಟ್ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಹಿಂದಿ ಚಿತ್ರರಂಗದ ಚಿರಪರಿಚಿತ ನಟ-ಗಾಯಕ ಜಾಫರ್, ಈ ಪ್ರಕರಣದ ಸಂಬಂಧ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
ಚಿತ್ರತಾರೆಯ ಕುಟುಂಬಕ್ಕೆ ಸೇರಿರುವ ಮೀಶಾ ಶಫಿ ಟ್ವೀಟರ್ನಲ್ಲಿ ಈ ಸಂಬಂಧ ದೀರ್ಘ ಹೇಳಿಕೆಗಳನ್ನು ನೀಡಿದ್ದಾರೆ. ನಾನು ಲೈಂಗಿಕ ದೌರ್ಜನ್ಯದ ಬಗ್ಗೆ ಈಗ ಮಾತನಾಡಲೇಬೇಕಿದೆ. ನನಗೆ ಆದ ಕೆಟ್ಟ ಅನುಭವಗಳನ್ನು ಹೊರ ಹಾಕುವ ಮೂಲಕ ನಮ್ಮ ಸಮಾಜದಲ್ಲಿರುವ ಮೌನ ಸಂಸ್ಕøತಿಯನ್ನು ನಾನು ಮುರಿಯಬೇಕಿದೆ. ಈ ವಿಷಯ ಹೇಳುವುದು ಅಷ್ಟು ಸುಲಭವಲ್ಲ. ಆದರೆ ಮೌನವಾಗಿರುವುದಕ್ಕೂ ಸಾಧ್ಯವಿಲ್ಲ. ಎಲ್ಲವನ್ನು ಸಹಿಸಿಕೊಂಡು ಇರಲು ನನ್ನ ಪ್ರಜ್ಞೆ ಅವಕಾಶ ನೀಡುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ನನ್ನ ಸಹೋದ್ಯೋಗಿ(ಗಾಯಕ ಮತ್ತು ನಟ ಅಲಿ ಜಾಫರ್) ನನ್ನ ಮೇಲೆ ದೈಹಿಕ ಸ್ವರೂಪದ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದನ್ನು ಸಹಿಸಲಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.
ಅನೇಕ ಯಶ್ವಸಿ ಮ್ಯೂಸಿಕ್ ಟ್ರ್ಯಾಕ್ಗಳನ್ನು ನಿರ್ಮಿಸಿರುವ ಹಾಗೂ ಮೀರಾ ನಾಯರ್ ಅವರ ರಿಲುಕ್ಟಂಟ್ ಫಂಡಮೆಂಟಲಿಸ್ಟ್ ಮತ್ತು ಬಾಲಿವುಡ್ನ ಭಾಗ್ ಮಿಲ್ಕಾ ಭಾಗ್ ಸಿನಿಮಾಗಳಲ್ಲಿ ಮೀಶಾ ಶಫಿ ನಟಿಸಿದ್ದಾರೆ.
ಮೀಶಾರ ಆರೋಪಗಳನ್ನು ನಿರಾಕರಿಸಿರುವ ಅಲಿ ಜಾಫರ್, ತಮ್ಮ ವಿರುದ್ಧ ಸುಳ್ಳು ಅಪಾದನೆಗಳನ್ನು ಮಾಡಿರುವ ನಟಿ ಮತ್ತು ಗಾಯಕಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ