ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌‌ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸಲು ವಿಪಕ್ಷಗಳಿಂದ ಉಪರಾಷ್ಟ್ರಪತಿ ಭೇಟಿ

ನವದೆಹಲಿ:ಏ-20: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌‌ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡಿಸಲು ನಿರ್ಧರಿಸಿರುವ ವಿಪಕ್ಷಗಳು ಈ ಸಂಬಂಧ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದಾರೆ.

ಉಪರಾಷ್ಟ್ರಪತಿ ಭೇಟಿಗೂ ಮುನ್ನ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರ ಕಚೇರಿಯಲ್ಲಿ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಬಿಎಸ್‌ಪಿ, ಆರ್‌ಜೆಡಿ, ಸಿಪಿಐಎಂ ಹಾಗೂ ಎನ್‌ಸಿಪಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಈ ಸಭೆ ನಂತರ ಗುಲಾಂ ನಬಿ ಆಜಾದ್‌ ನೇತೃತ್ವದ ನಿಯೋಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ, ನ್ಯಾ.ದೀಪಕ್ ಮಿಶ್ರಾ ಅವರ ವಿರುದ್ಧ ಪದತ್ಯುತಿ ನಿಲುವಳಿ ಮಂಡನೆಗೆ 60 ರಾಜ್ಯಸಭಾ ಸದಸ್ಯರು ಸಹಿ ಮಾಡಿದ್ದು, ಪ್ರಸ್ತಾವ ಮಂಡನೆಗೆ ಅವಕಾಶ ನೀಡುವಂತೆ ವೆಂಕಯ್ಯ ನಾಯ್ಡು ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗುಲಾಂ ನಬಿ ಆಜಾದ್‌, ಮುಖ್ಯ ನ್ಯಾಯಮೂರ್ತಿ ದೀಪಕ್‌‌ ಮಿಶ್ರಾ ವಿರುದ್ಧ ನಿಲುವಳಿ ಮಂಡಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ನಿಲುವಳಿ ಮಂಡಿಸಲು 72 ಸಂಸದರು ಸಹಿ ಮಾಡಿದ್ದಾರೆ. ಆದರೆ, ಇದರಲ್ಲಿ 7 ಮಂದಿ ಸಂಸದರು ನಿವೃತ್ತಿ ಹೊಂದಲಿದ್ದಾರೆ. ಆದರೂ, ನಾವು ಅಗತ್ಯ ಸದಸ್ಯರ ಬಲವನ್ನು ಹೊಂದಿದ್ದು, ಈ ಬಗ್ಗೆ ರಾಜ್ಯಸಭೆಯ ಸಭಾಧ್ಯಕ್ಷರು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.

ನ್ಯಾಯಾಧೀಶ ಬಿ.ಹೆಚ್. ಲೋಯಾ ಸಾವಿನ ಬಗ್ಗೆ ಇನ್ನು ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನಿನ್ನೆ ನೀಡಿದ್ದ ತೀರ್ಪು ಇದೀಗ ವಿರೋಧ ಪಕ್ಷಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ಕೆಲದಿನಗಳಿಂದ ತೆರೆಮನೆಯ ಹಿಂದೆ ನಡೆಯುತ್ತಿದ್ದ ಸಿದ್ಧತೆಗಳು, ನ್ಯಾಯಮೂರ್ತಿ ಲೋಯಾ ಸಾವಿನ ಕುರಿತಂತೆ ನೀಡಿದ್ದ ತೀರ್ಪಿನ ಬಳಿಕ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದೆ.

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ ಕುರಿತು ಲೋಯಾ ಅವರು ವಿಚಾರಣೆ ನಡೆಸುತ್ತಿದ್ದರು. ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಆರೋಪಿಯಾಗಿದ್ದರು. ಲೋಯಾ 2014ರ ಡಿಸೆಂಬರ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಲಾಗುತ್ತಿತ್ತು.

ಇದಾದ ಕೆಲವೇ ದಿನಗಳಲ್ಲಿ ಶಾ ಅವರನ್ನು ಪ್ರಕರಣದಿಂದ ಆರೋಪಮುಕ್ತಗೊಳಿಸಲಾಗಿತ್ತು. ಈ ನಿಗೂಢ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂಬ ಆಗ್ರಹ ದೇಶದಾದ್ಯಂತ ಕೇಳಿ ಬಂದಿತ್ತು. ಆದರೆ, ಯಾವುದೇ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದನ್ನು ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ.

Judge Loya verdict,CJI impeachment motion,Opposition parties hand over notice, to Vice President Venkaiah Naidu

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ