
ವಾಷಿಂಗ್ಟನ್, ಏ.20-ಕತುವಾ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿನಾ ಲಾಗರ್ಡೆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ಮಾಡಿದ್ದಾರೆ.
ವಾಷಿಂಗ್ಟನ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿವ ಅವರು, ಭಾರತದಲ್ಲಿ ಅತ್ಯಾಚಾರ, ದೌರ್ಜನ್ಯ ಮತ್ತು ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳು ಮತ್ತು ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಲು ಭಾರತದ ನಾಯಕರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಭಾರತದ ಆರ್ಥಿಕ ಸಾಧನೆ ಬಗ್ಗೆ ಪ್ರಶಂಸಿಸಿದ ಲಾಗರ್ಡೆ, ಕಾಶ್ಮೀರದ ಕತುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಕೃತ್ಯವನ್ನು ಖಂಡಿಸಿದರು. ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸಬೇಕು. ಇಂಥ ಕೃತ್ಯಗಳು ಮರುಕಳಿಸಲು ಅವಕಾಶ ನೀಡಬಾರದು ಎಂದು ಸಲಹೆ ಮಾಡಿದರು.