ಉಡುಪಿ, ಏ.20- ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದ ಕುಂದಾಪುರದ ಗುರುರಾಜ ಪೂಜಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಜಿಲ್ಲಾ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುರಾಜ್ ಅವರನ್ನು ಬರಮಾಡಿಕೊಂಡು ನಂತರ ಮಣಿಪಾಲದಲ್ಲಿರುವ ಇಲಾಖೆಯ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸನ್ಮಾನಿಸಿದರು.
ನಂತರ ಮಾತನಾಡಿದ ಗುರುರಾಜ್ ನನ್ನ ಹುಟ್ಟೂರಿನ ಜನ ಪ್ರೀತಿ , ಗೌರವಕ್ಕೆ ನಾನು ಆಬಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಒಲಂಪಿಕ್ ಪದಕ ಗೆಲ್ಲಲು ಶ್ರಮಿಸುತ್ತೇನೆ. ದೇಶಕ್ಕೆ ಕೀರ್ತಿ ತರುವ ಮಹದಾಸೆ , ಗುರಿ ನನ್ನ ಮುಂದಿದೆ ಎಂದು ಹೇಳಿದರು.
ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮನವಿಯನ್ನು ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮಾತನಾಡಿ, ಕಷ್ಟದ ಪರಿಸ್ಥಿತಿಯಲ್ಲೂ ಛಲ ಬಿಡದೆ ಅಂದುಕೊಂಡಿದ್ದನ್ನು ಸಾಧಿಸುವ ಛಲ ಹೊಂದಿದ್ದ ಗುರುರಾಜ್ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. ಮಕ್ಕಳು ಕ್ರೀಡಾ ಸ್ಫೂರ್ತಿ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.