ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ದ ಸಚಿವ ಜಾರ್ಜ್ ವಾಗ್ದಾಳಿ

 

ಬೆಂಗಳೂರು,ಏ.20-ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ದ ಸಚಿವ ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೈ ನಾಯಕರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಚಾರ ತಿಳಿಯದೆ ಅಮಿತ್ ಷಾ ಹಾಗೂ ಮೋದಿ ಮಾತನಾಡುತ್ತಿದ್ದಾರೆ. ಮೊದಲು ಅವರು ಹೋಮ್ ವರ್ಕ್ ಮಾಡಬೇಕು ಎಂದು ಟೀಕಿಸಿದರು.

ಸಬರ್ಬನ್ ಟ್ರೈನ್ ಯೋಜನೆಯ ಒಟ್ಟು ವೆಚ್ಚ 14 ಸಾವಿರ ಕೋಟಿ ಆದರೆ 17 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದರು. ಬೆಂಗಳೂರಿನ ಬಗ್ಗೆ ಮೋದಿ ಹೇಳಿಕೆ ನೀಡುತ್ತಾರೆ. ಅವರಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಅವಧಿಯಲ್ಲಿ ಬೆಂಗಳೂರನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾಡಲಾಗಿತ್ತು. ಈಗ ನಾವು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದೇವೆ. ಅಕ್ಕಪಕ್ಕದ ಹಳ್ಳಿಗಳನ್ನು ಸೇರಿಸಿ ಬೆಂಗಳೂರನ್ನು ವಿಸ್ತರಿಸಿದ್ದರು. ಆದರೆ ವಿಸ್ತಾರಗೊಂಡ ಬೆಂಗಳೂರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ. ಈ ಎಲ್ಲ ಪ್ರದೇಶಗಳಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಿದ್ದು ನಾವು. ಇಂತಹ ವಿಷಯಗಳ ಬಗ್ಗೆ ಅರಿವಿಲ್ಲದೆ ಮೋದಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಜಾರ್ಜ್ ಹರಿಹಾಯ್ದರು.

ಸಿಎಂ ವಾಚಿನ ಬಗ್ಗೆ ಅಮಿತ್ ಷಾ ಮಾತನಾಡಿದ್ದಾರೆ. ಅವರಿಗೆ ನಾವೇ ಹೇಳಿಕೊಡುತ್ತೇವೆ.ಯಾವುದೇ ಗಿಫ್ಟ್ ಬಂದರೂ ಅದು ಸರ್ಕಾರಕ್ಕೆ ಸೇರುತ್ತದೆ. ತಮಗೆ ಬಂದ ವಾರ್ಚ್‍ಗೆ ಸಿಎಂ ತೆರಿಗೆ ಕಟ್ಟಿದ್ದಾರೆ. ಅಲ್ಲದೆ ಅದನ್ನು ಕ್ಯಾಬಿನೆಟ್ ಹಾಲ್‍ನಲ್ಲಿ ಇಟ್ಟಿದ್ದಾರೆ. ಇವೆಲ್ಲವನ್ನೂ ಷಾ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.

ಬಸವಣ್ಣನವರ ಪ್ರತಿಮೆಗೆ ಅಮಿತ್ ಷಾ ಹಾರ ಹಾಕುವ ವೇಳೆ ಕೆಳಗೆ ಬಿದ್ದಿದೆ. ಬಸವಣ್ಣ ಕೂಡ ಷಾ ಕೈಯಿಂದ ಹಾರ ಹಾಕಿಸಿಕೊಳ್ಳಲಿಲ್ಲ ಎಂದು ಟೀಕಿಸಿದ ಅವರು, ಬೆಂಗಳೂರಿನಲ್ಲಿ ಸುನಾಮಿ ಆರಂಭ ಅಂತಾರೆ. ಸುನಾಮಿ ಎಂಬುದು ನೈಸರ್ಗಿಕ ವಿಕೋಪ. ಸುನಾಮಿ ಬಂದರೆ ಜನ ಇರಲು ಸಾಧ್ಯವೇ. ಸುನಾಮಿಯಂತೆ ಜನರೇ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.

ಪ್ರಧಾನಿ ಮೋದಿ ಅವರಿಗೆ ದುಬಾರಿ ಕೋಟ್‍ಕೊಟ್ಟವರು ಯಾರು? ಅದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬಾದಾಮಿಯಲ್ಲಿ ಸಿಎಂ ಸ್ಪರ್ಧೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ನನ್ನ ಕ್ಷೇತ್ರವನ್ನೇ ಬಿಟ್ಟುಕೊಡಲು ಮುಂದಾಗಿದ್ದೆ. ಅವರು ರಾಜ್ಯಕ್ಕೆ ಉತ್ತಮ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ಸ್ಪರ್ಧಿಸಿದರೆ ಆ ಭಾಗಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.

ಕಾಂಗ್ರೆಸ್ 224 ಕ್ಷೇತ್ರಗಳಲ್ಲೂ ಬಲಾಢ್ಯವಾಗಿದೆ ಎಂದು ಜಾರ್ಜ್ ನುಡಿದರು.
ಇದೇ ವೇಳೆ ಜನಹಿತ ಪಕ್ಷದ ಮುಖಂಡರಾದ ನಾಗರಾಜ ನಾಯಕ, ಕೃಷ್ಣ ಬಳಿಗಾರ್, ಗಜಾನನ, ಸುರೇಶ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡರು. ಎಐಸಿಸಿಯ ಪ್ರಿಯಾಂಕ ಚರ್ತುವೇದಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ