ಮಾಜಿ ಸಚಿವ ಅಡಗೂರು ವಿಶ್ವನಾಥ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ:

ಹುಣಸೂರು, ಏ.20- ಮುಂದಿನ ತಿಂಗಳು 12ರಂದು ನಡೆಯಲಿರುವ ವಿದಾನಸಭೆ ಚುನಾವಣೆಗೆ ಅಪಾರ ಬೆಂಬಲಿಗರೊಂದಿಗೆ ಮಾಜಿ ಸಚಿವ ಅಡಗೂರು ವಿಶ್ವನಾಥ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಶ್ರೀ ಗದ್ದುಗೆ ಕೆಂಗಣ್ಣೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ನಂತರ ಜಿ.ಟಿ.ದೇವೇಗೌಡ ಹಾಗೂ ಸಾವಿರಾರು ಅಭಿಮಾನಿಗಳೊಂದಿಗೆ ತೆರಳಿ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವಿನಾಯಕ ಮತ್ತು ಶ್ರೀ ಶಿರಡಿ ಸಾಯಿಬಾಬಾನಿಗೆ ಪೂಜೆ ಸಲ್ಲಿಸಿದ ನಂತರ ಸುಮಾರು ಐದು ಸಾವಿರ ಪಕ್ಷದ ಕಾರ್ಯಕರ್ತರ ಜೊತೆಗೂಡಿ ಕಾಲ್ನಡಿಗೆಯಲ್ಲೇ ಸಾಗಿ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ತಾಲೂಕಿನ ಜನತೆ ಜೆಡಿಎಸ್ ಪಕ್ಷದ ಪರವಾಗಿದ್ದು ನನ್ನ ಗೆಲುವೂ ಕೂಡ ಬೆಳಕಿನಷ್ಟೇ ಸತ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ರಾಜ್ಯದ ಚುಕ್ಕಾಣಿ ಹಿಡಿಯಬೇಕು ಎಂಬ ಕನಸು ಜನತೆಯ ಆಶೆಯಾಗಿದ್ದು ಅದಕ್ಕೆ ಇಡೀ ತಾಲೂಕಿನ ಎಲ್ಲ ಸಮುದಾಯಗಳು ಕೈಜೋಡಿಸಿದ್ದು ಮುಂದಿನ ತಿಂಗಳು ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ, ನಾನೂ ಕೂಡ ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಲಿದ್ದೇನೆ ಎಂದು ಭವಿಷ್ಯ ನುಡಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ. ದುರಾಡಳಿತದ ವಿರುದ್ದ ಜನತೆ ಬೇಸತ್ತಿದ್ದು ಹಾಗೂ ಶಾಸಕ ಎಚ್.ಪಿ.ಮಂಜುನಾಥ್ ಕಿರುಕುಳದಿಂದ ತಾಲೂಕಿನ ಮತದಾರ ರೋಸಿ ಹೋಗಿದ್ದು ಬದಲಾವಣೆ ಬಯಸಿ ಕುಮಾರಣ್ಣನ ಪರ ವಾಲಿದ್ದಾರೆ.
ನಗರಸಭಾಧ್ಯಕ್ಷ ಶಿವಕುಮಾರ್, ಜಿ.ಪಂ ಸದಸ್ಯ ಅಮಿತ್.ವಿ.ದೇವರಹಟ್ಟಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಬಿ. ಮಾದೇಗೌಡ, ನಗರಸಭೆ ಸದಸ್ಯರಾದ ಹಜರತ್ ಜಾನ್, ಹೆಚ್.ವೈ.ಮಹದೇವ್, ಎಚ್.ಪಿ.ಸತೀಶ್ ಕುಮಾರ್, ಪ್ರೇಮಾ ನಂಜಪ್ಪ, ಶರವಣ, ಸುನಿತಾ ಜಯರಾಮೇಗೌಡ, ಅಣ್ಣಯ್ಯ ನಾಯ್ಕ, ಜಿಪಂ ಸದಸ್ಯ ಸುರೇಂದ್ರ, ದಲಿತ ಮುಖಂಡರಾದ ಹರಿಹರ ಆನಮದ ಸ್ವಾಮಿ, ಬಸವಲಿಂಗಯ್ಯ, ಬಿಳಿಕೆರೆ ರಾಜು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ