ಬೆಂಗಳೂರು,ಏ.20- ಪ್ರತಿ ಚುನಾವಣೆಯಲ್ಲೂ ಪ್ರತಿಪಕ್ಷಗಳು, ಆಡಳಿತ ಪಕ್ಷದ ವಿರುದ್ಧ ಅಜೆಂಡಾ (ಕಾರ್ಯಸೂಚಿ)ನಿಗದಿಪಡಿಸಿ ಸವಾರಿ ನಡೆಸುತ್ತವೆ. ಆದರೆ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಜೆಂಡಾ ನಿಗದಿ ಮಾಡಿಲ್ಲ. ಆದರೂ ರಾಜ್ಯದಲ್ಲಿ ಈ ಬಾರಿ ಸುಮಾರು 15 ಪ್ರಮುಖ ಸಂಗತಿಗಳು ಚುನಾವಣಾ ಸಂದರ್ಭದಲ್ಲಿ ಚರ್ಚೆಯ ವಿಷಯಗಳಾಗುವ ನಿರೀಕ್ಷೆಗಳಿವೆ.
ರಾಜ್ಯದ ಜನತೆ ಚರ್ಚೆ ನಡೆಸುವುದು ಜ್ವಲಂತ ಸಮಸ್ಯೆಗಳಿಗಿಂತ ವಿಭಿನ್ನ ವಿಷಯಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಕೆಲವು ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಚರ್ಚೆಯಲ್ಲಿದ್ದರೆ, ಮತ್ತೆ ಕೆಲವು ಪ್ರಾದೇಶಿಕವಾರು ವಿಷಯ. ಲಿಂಗಾಯತ ಪ್ರತ್ಯೇಕ ಧರ್ಮ, ಕನ್ನಡ ಧ್ವಜ, ಟಿಪ್ಪು ಜಯಂತಿ, ಅಹಿಂದ ಸರ್ಕಾರ, ಮೀಸಲಾತಿ ಪ್ರಮಾಣ ಹೆಚ್ಚಳ, ಸದಾಶಿವ ವರದಿ, ಜಾತಿಗಣತಿ, ವಂಶಾಡಳಿತ, ಜಲ ವಿವಾದಗಳು, ಜಾತಿ-ಮಠಗಳ ಮೂಲಕ ಪ್ರಭಾವ, ಕನ್ನಡಿಗರಿಗೆ ಉದ್ಯೋಗ, ಹಣ ಹಾಗೂ ಮದ್ಯ ಹಂಚಿಕೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಚುನಾವಣೆಯಲ್ಲಿ ಚರ್ಚೆಯ ವಿಷಯಗಳಾಗುತ್ತಿವೆ.
ಜಾತಿ ಮತ್ತು ಜಯಂತಿ:
ರಾಜ್ಯ ಸರ್ಕಾರ ಒಂದು ವರ್ಗವನ್ನು ಓಲೈಸುವ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ನಡೆಸಿ ಸಮಾಜದಲ್ಲಿ ಬಿರುಕು ಮೂಡಿಸಲು ಯತ್ನಿಸಿದೆ ಎಂಬುದು ಲಿಂಗಾಯತ ಪ್ರತ್ಯೇಕ ಧರ್ಮದಷ್ಟೇ ಚರ್ಚೆಯ ಸಂಗತಿ. ಮೀಸಲಾತಿಗೆ ಸಂಬಂಧಿಸಿದಂತೆಯೂ 3 ಅಂಶಗಳು ಗಮನ ಸೆಳೆಯುತ್ತಿವೆ. ಮಾದಿಗ ಮೀಸಲಾತಿಗೆ ನಡೆದಿರುವ ಹೋರಾಟ ಒಂದೆಡೆಯಾದರೆ, ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡಲಿಲ್ಲವೆಂಬುದು ಮತ್ತೊಂದು ವಿಚಾರ.
ಮೀಸಲಾತಿ ಪ್ರಮಾಣ ಶೇ.70ಕ್ಕೆ ಏರಿಸುವ ಮಾತುಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆಯೂ ಚರ್ಚೆ ನಡೆದಿದೆ.
ರಾಜ್ಯ ಸರ್ಕಾರ ಅಹಿಂದವೆಂದೆ ಗುರುತಿಸಿಕೊಂಡು ಅನೇಕ ಯೋಜನೆಗಳನ್ನು ರೂಪಿಸಿ, ಇತರೆ ವರ್ಗಗಳ ಕೆಂಗಣ್ಣಿಗೂ ಗುರಿಯಾಗಿರುವುದು ಸುಳ್ಳಲ್ಲ. ಇನ್ನೊಂದೆಡೆ ರಾಜ್ಯ ಸರ್ಕಾರದ ಭಾಗ್ಯ ಯೋಜನೆ ಸರಣಿ ಬಗ್ಗೆ ಪರ-ವಿರೋಧ ಚರ್ಚೆ ಜನ ಸಾಮಾನ್ಯರಲ್ಲಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ನಡೆಯುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆಯೂ ಇದೇ ಸ್ಥಿತಿ ಇದೆ.
ಅಪ್ಪ ಮಕ್ಕಳ ರಾಜಕಾರಣ:
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳಿಗೆ ಟಿಕೆಟ್ ಕೇಳುವುದು ಹೆಚ್ಚಾಗಿದೆ. ಕಾಂಗ್ರೆಸ್ನಲ್ಲಿ 20ಕ್ಕೂ ಹೆಚ್ಚು ಜನ ತಮ್ಮ ವಾರಸುದಾರರನ್ನು ಚುನಾವಣಾ ರಾಜಕೀಯಕ್ಕೆ ತರಲು ಮುಂದಾಗಿದ್ದರು. ಆದರೆ, ಕೆಲವರಷ್ಟೇ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಿಜೆಪಿಯಲ್ಲಿ 10ಕ್ಕೂ ಹೆಚ್ಚು ಜನ ಮಕ್ಕಳಿಗೆ ಟಿಕೆಟ್ ಕೇಳುತ್ತಿದ್ದಾರೆ. ಜೆಡಿಎಸ್ ಬಗ್ಗೆ ಇರುವ ಅಭಿಪ್ರಾಯವೇ ಬೇರೆಯಾಗಿದೆ.
ಲಿಂಗಾಯತ ಪ್ರತ್ಯೇಕ ಧರ್ಮದ ನಂತರ ಮಠಗಳ ಪ್ರಭಾವದ ಬಗ್ಗೆ ಮತದಾರರಲ್ಲಿ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಕೆಲ ಮಠಾಧೀಶರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಆಸಕ್ತಿ ತೋರಿಸಿದ್ದಾರೆ. ಮಹದಾಯಿ, ಕಾವೇರಿ, ಕೃಷ್ಣ ಜಲ ವಿವಾದ, ಗಡಿ ವಿವಾದ ಆಯಾ ಭಾಗಗಳಲ್ಲಿ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿದೆ.
ವಿಶೇಷವಾಗಿರುವ ಆರೋಪ-ಪ್ರತ್ಯಾರೋಪ :
ಯಾವುದೇ ಪಕ್ಷದ ಮುಖಂಡರು ಸಾಮಾಜಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಈ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಆರೋಪ ಹಾಗೂ ಪ್ರತ್ಯಾರೋಪಗಳನ್ನು ಮಾಡುತ್ತಿರುವುದು ಈ ಚುನಾವಣೆಯ ಮತ್ತೊಂದು ವಿಶೇಷ. ಕನ್ನಡದ ಅಸ್ಮಿತೆಗೆ ಸಂಬಂಧಿಸಿ 3 ಪ್ರಮುಖ ವಿಷಯಗಳಿವೆ. ಅದರಲ್ಲಿ ಪ್ರಮುಖವಾದದ್ದು ಹಿಂದಿ ಹೇರಿಕೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕನ್ನಡಿಗರಿಗೆ ಉದ್ಯೋಗ ಎಂಬುದು ಮರೀಚಿಕೆಯಾಗಿದೆ. ಈ ಮೂರು ವಿಚಾರಗಳು ರಾಜ್ಯದ ಅಲ್ಲಲ್ಲಿ ಚರ್ಚೆಯ ವಿಷಯಗಳಾಗಿವೆ.
ಪ್ರಮುಖ ಪಾತ್ರದಲ್ಲಿ ಜಾತಿ ?
ಈ ಬಾರಿಯ ಚುನಾವಣೆಯಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ಜಾತಿ ನೋಡಿಯೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿವೆ. ಯಾವ ಜಾತಿ ಎಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದು ರಾಜ್ಯಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.