
ಬೆಂಗಳೂರು,ಏ.20- ಅದೇಕೋ ಈ ಚುನಾವಣೆಯಲ್ಲಿ ಬೆಲೆ ಏರಿಕೆ ವಿಷಯವಾಗಲಿ, ಭ್ರಷ್ಟಾಚಾರದ ವಿಷಯವಾಗಲಿ ಸದ್ದು ಮಾಡುತ್ತಿಲ್ಲ. ಕೇವಲ ರಾಜಕಾರಣಿಗಳ ವೈಯಕ್ತಿಕ ಪ್ರತಿಷ್ಠೆ ಯ ಆರೋಪ -ಪ್ರತ್ಯಾರೋಪಗಳು ಮಾತ್ರ ಕೇಳಿಬರುತ್ತಿದೆ.
ಯಾವುದೇ ಚುನಾವಣೆಯಲ್ಲಿ ಬೆಲೆ ಏರಿಕೆ, ಮೂಲಭೂತ ಸೌಕರ್ಯಗಳ ಕೊರತೆ ಚುನಾವಣಾ ಪ್ರಚಾರದ ಪ್ರಧಾನ ವಿಷಯಗಳಾಗಿರುತ್ತಿದ್ದವು. ಪೆಟ್ರೋಲ್, ಡೀಸೆಲ್ ದರ ಏರಿಕೆ, ಹೋಟೆಲ್ ತಿಂಡಿಗಳ ದರ ಏರಿಕೆ, ದಿನನಿತ್ಯದ ಪದಾರ್ಥಗಳ ಬೆಲೆ ಏರಿಕೆ ಗಗನಮುಖಿಯಾಗುತ್ತಿದ್ದರೂ ಜನ ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಚುನಾವಣೆಯಲ್ಲಿ ಈ ಯಾವ ವಿಷಯಗಳು ಪ್ರಧಾನವಾಗುತ್ತಿಲ್ಲ. ಅಕ್ಕಿ, ಬೇಳೆಕಾಳು, ಬೆಲ್ಲ, ತರಕಾರಿ ಬೆಲೆಗಳು ಇಳಿದಿಲ್ಲ. ನೀರಿನ ಕೊರತೆ ಎದ್ದು ಕಾಣುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಆದರೆ ಇವ್ಯಾವುದೂ ಪ್ರಚಾರದ ಸಂದರ್ಭದಲ್ಲಿ ಪ್ರಾಮುಖ್ಯತೆ ಪಡೆಯುತ್ತಿಲ್ಲ.
ರಾಜಕಾರಣಿಗಳು ಪರಸ್ಪರ ಆರೋಪ, ಪ್ರತ್ಯಾರೋಪ ವೈಯಕ್ತಿಕ ನಿಂದನೆಯಲ್ಲಿ ತೊಡಗುತ್ತಿದ್ದಾರೆ. ಆಣೆ-ಪ್ರಮಾಣದಲ್ಲಿ ನಿರತರಾಗಿದ್ದಾರೆ. ಪ್ರಮುಖ ನಾಯಕರಂತೂ ಮಾತೆತ್ತಿದರೆ ಅಪ್ಪಾರಣೆ ಗೆಲ್ಲುವುದಿಲ್ಲ ,ಸೋಲುತ್ತಾರೆ ಎಂಬಿತ್ಯಾದಿ ಹೇಳಿಕೆಗಳಲ್ಲೇ ತೊಡಗಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಬೃಹತ್ ರ್ಯಾಲಿ, ರೋಡ್ಶೋ,ಜನಾಶೀರ್ವಾದಯಾತ್ರೆ, ವಿಕಾಸಯಾತ್ರೆ, ಪರಿವರ್ತನಾ ಯಾತ್ರೆಗಳನ್ನು ಮಾಡುತ್ತಿವೆ.
ವಿವಿಧ ಶೀರ್ಷಿಕೆಯಡಿ ಬೃಹತ್ ಸಮಾರಂಭಗಳನ್ನು ಮಾಡಿದೆ. ಆದರೆ ಯಾವುದೇ ರೀತಿಯ ಬೆಲೆ ಏರಿಕೆ, ಗಂಭೀರ ಪ್ರಮಾಣದ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಉಲ್ಲೇಖವಾಗಿಲ್ಲ. 10% ಸರ್ಕಾರ ಪ್ರಧಾನಿ ಮೋದಿ ಆರೋಪಿಸಿದರೆ,ಕೇಂದ್ರ ಸರ್ಕಾರ 90% ಸರ್ಕಾರವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಿದ್ದ ಹ್ಯೂಬ್ಲೆಟ್ ವಾಚ್ನ ವಿಷಯ ಪ್ರಚಾರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಮೋದಿ ಅವರು ಧರಿಸುವ ಕೋರ್ಟ್ನ ವಿಷಯ ಪ್ರಸ್ತಾಪವಾಗಿದೆ. ಆದರೆ ಅಕ್ಕಿ,ಬೇಳೆ, ಬೆಲ್ಲ, ಸಕ್ಕರೆ, ಮಧ್ಯಮ ವರ್ಗದವರು ಬಳಸುವ ವಸ್ತುಗಳ ಬೆಲೆ ಏರಿಕೆಯ ವಿಷಯಗಳು ಪ್ರಸ್ತಾಪವಾಗದಿರುವುದು ದುರದೃಷ್ಟಕರ ಸಂಗತಿ.
ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಸಂದರ್ಭದಲ್ಲಿ ಭಾರೀ ಆಮಿಷಗಳನ್ನುಒಡ್ಡುತ್ತಿದ್ದಾರೆ. ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ರೈತರ, ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಬಿಜೆಪಿ ಪಕ್ಷ ನೀರಾವರಿಗೆ ಒಂದು ಲಕ್ಷ ಕೋಟಿ ಅನುದಾನ ನೀಡುವುದಾಗಿ ಪ್ರಕಟಿಸಿದೆ.
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ 165 ಭರವಸೆಗಳಲ್ಲಿ ಶೇ.95ರಷ್ಟು ಭರವಸೆಗಳನ್ನು ಈಡೇರಿಸಿರುವುದಾಗಿ ತಿಳಿಸಿದೆ. ಇನ್ನು ಹತ್ತುಹಲವು ಭರವಸೆಗಳನ್ನು ನೀಡಲು ಪ್ರಣಾಳಿಕೆಯನ್ನು ಸಿದ್ದಪಡಿಸುತ್ತಿದೆ. ಜನಪರ ಯೋಜನೆಗಳಿಂತ ಎಲ್ಲ ಪಕ್ಷಗಳು ಜನಪ್ರಿಯ ಯೋಜನೆಯನ್ನೇ ತಯಾರು ಮಾಡಿಕೊಳ್ಳುತ್ತಿದೆ.
ಆದರೆ ಪೆಟ್ರೋಲ್ 75 ರೂ. ಡೀಸೆಲ್ 65 ರೂ. ಅಕ್ಕಿ 50 ರೂ. ಬೇಳೆ 100 ರೂ. ಬೆಲ್ಲ 80 ರೂ. ಕುಡಿಯುವ ನೀರಿನ ಬಾಟಲ್ ಲೀಟರ್ವೊಂದಕ್ಕೆ 20 ರೂ. ಸೇರಿದಂತೆ ಎಲ್ಲ ಬೆಲೆಗಳು ಗಗನಮುಖಿಯಾಗುತ್ತಿವೆ. ಬೆಲೆಗಳನ್ನು ಇಳಿಸುತ್ತೇವೆ ಎಂದು ಯಾವ ಪಕ್ಷಗಳು ಹೇಳುತ್ತಿಲ್ಲ. ಜನರು ಕೂಡ ಏರುತ್ತಿರುವ ಬೆಲೆಗಳ ಬಗ್ಗೆ ಪ್ರಚಾರಕ್ಕೆ ಬರುತ್ತಿರುವ ರಾಜಕಾರಣಿಗಳ ಮುಂದೆ ಪ್ರಶ್ನೆ ಮಾಡುತ್ತಿಲ್ಲ.
ದಿನೇ ದಿನೇ ಬೆಲೆಗಳ ಏರಿಕೆಗೆ ಜನ ಅನಿವಾರ್ಯವಾಗಿ ಹೊಂದಿಕೊಳ್ಳುತ್ತಿದ್ದಾರೋ ಅಥವಾ ಏನೂ ಮಾಡಲಾರದೆ ಅಸಹಾಯಕರಾಗಿ ಕೈ ಚೆಲ್ಲಿ ಕುಳಿತಿದ್ದಾರೋ ಗೊತ್ತಿಲ್ಲ.
2014ರ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರದ ವಿಷಯವೇ ಪ್ರಧಾನವಾಗಿತ್ತು. ಪೆಟ್ರೋಲ್, ಡೀಸೆಲ್, ಬೇಳೆಕಾಳು, ತರಕಾರಿ, ದಿನನಿತ್ಯದ ವಸ್ತುಗಳು, ವಿವಿಧ ಹಗರಣಗಳು ದೇಶಾದ್ಯಂತ ಸದ್ದು ಮಾಡಿ ದೇಶದ ಇಡೀ ರಾಜಕೀಯ ಚಿತ್ರಣವನ್ನೇ ಬದಲು ಮಾಡಿತ್ತು.
ಆದರೆ ಅಂದು ಇದ್ದ ಬೆಲೆ ಇಂದಿಗೂ ಕೂಡ ಇಳಿದಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಡಿಮಾನಿಟೇಷನ್ ಜಿಎಸ್ಟಿಯಿಂದ ಅನುಕೂಲದ ಜೊತೆಗೆ ಜನರಿಗೆ ಅನಾನುಕೂಲವೂ ಆಗಿದೆ. ಇದ್ಯಾವ ವಿಷಯಗಳು ಚುನಾವಣಾ ಸಂದರ್ಭದಲ್ಲಿ ಪ್ರಾಮುಖ್ಯತೆ ಪಡೆಯದಿರುವುದು ವಿಪರ್ಯಾಸ.
ಕೇವಲ ಧರ್ಮ, ಜಾತಿ, ಕ್ಷೇತ್ರ, ರಾಷ್ಟ್ರೀಯ ಪಕ್ಷಗಳ ಜಿದ್ದಾಜಿದ್ದಿ ಪ್ರಾದೇಶಿಕ ಪಕ್ಷಗಳ ಅಸ್ಮಿತೆ, ರಾಜಕೀಯ ಪಕ್ಷಗಳ ಮೇಲಾಟ ಇವೇ ಪ್ರಮುಖವಾಗಿವೆ.