ಬೆಂಗಳೂರು,ಏ.20- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಸೇರಿದಂತೆ ಎಂಟು ಮಾಜಿ ಸಿಎಂಗಳ ಪುತ್ರರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ರಾಜಕಾರಣದಲ್ಲಿ ತಾವಿರುವಾಗಲೇ ಮಕ್ಕಳಿಗೊಂದು ನೆಲೆ ಒದಗಿಸಬೇಕೆಂಬ ಹಪಾಹಪಿಗೆ ಬಿದ್ದವರಲ್ಲಿ ಅನೇಕರು. ಕುಟುಂಬ ರಾಜಕಾರಣವನ್ನೇ ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬದಲಾದ ಕಾಲಘಟ್ಟದಲ್ಲಿ ಕುಟುಂಬ ರಾಜಕಾರಣಕ್ಕೆ ತಲೆಬಾಗಿದರು.
ಕುಟುಂಬ ರಾಜಕಾರಣ ಎಂದರೆ ಮೊದಲ ಹೆಸರು ಕೇಳಿ ಬರುವುದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ. ತದನಂತರ ಬಹುತೇಕ ಆಡಳಿತ ನಡೆಸಿದ ಬಹುತೇಕ ಎಲ್ಲ ಮುಖ್ಯಮಂತ್ರಿಗಳು ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗುಂಡೂರಾವ್ ಅವರಿಂದ ಹಿಡಿದು ಜೆ.ಎಚ್.ಪಟೇಲ್, ಎಸ್.ಬಂಗಾರಪ್ಪ , ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ , ಎಸ್.ಆರ್.ಬೊಮ್ಮಾಯಿ, ಧರ್ಮಸಿಂಗ್ ಪುತ್ರ ಅಖಾಡಕ್ಕಿಳಿದಿದ್ದಾರೆ.
ವಿಶೇಷವೆಂದರೆ ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರರಾದ ಕುಮಾರಬಂಗಾರಪ್ಪ -ಮಧು ಬಂಗಾರಪ್ಪ ಸೊರಬದಲ್ಲಿ ಎದುರಾಳಿಗಳಾಗುವ ಮೂಲಕ ಸಹೋದರರೇ ಸವಾಲು ಹಾಕಿಕೊಂಡಿದ್ದಾರೆ.
ಮತ್ತೊಂದು ವಿಶೇಷವೆಂದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ(ರಾಮನಗರ) ಮಾಜಿ ಸಚಿವ ಎಚ್.ಡಿ.ರೇವಣ್ಣ (ಹೊಳೆನರಸೀಪುರ) ಅವರು ಒಂದೇ ಪಕ್ಷದಿಂದ ಕಣಕ್ಕಿಳಿದಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರಾದ ಎಂಟು ಮಂದಿ ಕಣಕ್ಕಿಳಿಯಲಿದ್ದಾರೆ.
ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ, ಡಾ.ಯತೀಂದ್ರ ಮೈಸೂರಿನ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗ ಮುಂದಾಗುತ್ತಿದ್ದರೆ, ಅವರ ಎದುರಾಳಿಯಾಗಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ, ಬಿ ವೈ ವಿಜಯೇಂದ್ರ ಬಿಜೆಪಿಯಿಂದ ಸ್ಫರ್ಧಿಸುವುದು ಬಹುತೇಕ ಖಚಿತವಾಗಿದೆ.
ಕುಟುಂಬ ರಾಜಕಾರಣದ ಕುರಿತ ಟೀಕೆಗಳು ಹಳೆಯ ವಿಚಾರವಾಗಿದೆ. ತಮ್ಮ ರಾಜಕೀಯ ಗುರು ಎಚ್‍ಡಿ ದೇವೇಗೌಡರನ್ನು ಇದೇ ವಿಚಾರವಾಗಿ ಸಾಕಷ್ಟು ಟೀಕೆ ಮಾಡುತ್ತಿದ್ದ ಸಿದ್ಧರಾಮಯ್ಯ ಖುದ್ದು ತಮ್ಮ ಪುತ್ರನಿಗೆ ಟಿಕೆಟ್ ಪಡೆದುಕೊಳ್ಳಲು ಕಾಂಗ್ರೆಸ್‍ನಲ್ಲಿ ಸಾಕಷ್ಟು ಲಾಬಿ ಮಾಡಿದ್ದಾರೆ ಎಂದು ರಾಜಕೀಯ ತಜ್ಞ, ಎಂ ಕೆ ಮೋಹನ್‍ರಾಮ್ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಪುತ್ರರಾದ ಕುಮಾರ್ ಹಾಗು ಮಧು ಎದುರಾಬದುರಾಗುವ ಸಾಧ್ಯತೆ ಇದೆ. ಕುಮಾರ್ ಬಿಜೆಪಿ ಅಭ್ಯರ್ಥಿಯಾದರೆ, ಮಧು ಕಾಂಗ್ರೆಸ್‍ನಿಂದ ಕಣಕ್ಕಿಳಿಯಲಿದ್ದಾರೆ.
ಮತ್ತೊಬ್ಬ ಮುಖ್ಯಮಂತ್ರಿಯಾದ ಜೆ ಎಚ್ ಪಟೇಲ್ ಪುತ್ರ ಮಹಿಮಾ ಪಟೇಲ್ ದಾವಣಗೆರೆಯ ಚನ್ನಗಿರಿ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಪುತ್ರ ಅಜಯ್ ಸಿಂಗ್ ಕಲಬುರಗಿ ಜಿಲ್ಲೆಯ ಜೇವರ್ಗಿಯಿಂದ ಮರುಆಯ್ಕೆ ಬಯಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವದಿಂದ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಯಿ ಪುತ್ರ, ಬಸವರಾಜ ಬೊಮ್ಮಾಯಿ , ಬಿಜೆಪಿ ಟಿಕೆಟ್ ಪಡೆದು ಸ್ಫರ್ಧಿಸಲಿದ್ದಾರೆ.
ಡಾ.ಯತೀಂದ್ರ :
ರಾಜ್ಯದಲ್ಲಿ ಅತ್ಯಂತ ಹೈವೋಲ್ಟೇಜ್ ಕ್ಷೇತ್ರ ಎನಿಸಿರುವುದು ಮೈಸೂರು ಜಿಲ್ಲೆಯ ವರುಣಾ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಇಲ್ಲಿ ಕಾಂಗ್ರೆಸ್ ಹುರಿಯಾಳು. ಅವರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಬಿಜೆಪಿ ಅಭ್ಯರ್ಥಿ. ವಿಜಯೇಂದ್ರ-ಯತೀಂದ್ರರ ಸ್ಪರ್ಧೆಯಿಂದ ವರುಣಾ ರಾಷ್ಟ್ರದ ಗಮನ ಸೆಳೆದಿದೆ.
ವಿಜಯೇಂದ್ರ:
ಯಡಿಯೂರಪ್ಪನವರ ಕಿರಿಯ ಪುತ್ರನಾಗಿರುವ ವಿಜಯೇಂದ್ರ ಈವರೆಗೂ ಯಾವುದೇ ಚುನಾವಣೆ ಎದುರಿಸಿದ ಅನುಭವವಿಲ್ಲ. ತೆರೆಮರೆಯಲ್ಲೇ ಕುಳಿತು ಅಪ್ಪನ ಗೆಲುವಿಗೆ ಶ್ರಮಿಸುತ್ತಿದ್ದರು. ಮೊದಲ ಬಾರಿಗೆ ಅವರು ವರುಣಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಮಹಿಮ ಪಾಟೀಲ್:
ಸಮಾಜವಾದಿ ಚಿಂತಕ ತಮ್ಮ ಹಾಸ್ಯದ ಮೂಲಕವೇ ಎದುರಾಳಿಗಳನ್ನು ಚಿತ್ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ:
ಶಾಸಕರಾದ ಮೊದಲ ಅವಧಿಯಲ್ಲೇ ಮುಖ್ಯಮಂತ್ರಿಯಾದ ಹೆಗ್ಗಳಿಕೆಗೆ ಪಾತ್ರವಾಗಿರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ರಾಮನಗರದಿಂದ ಜೆಡಿಎಸ್ ಹುರಿಯಾಳಾಗಿ ಅಖಾಡಕ್ಕಿಳಿದಿದ್ದಾರೆ. 2004ರಿಂದ ಸತತ ಮೂರು ಬಾರಿ ಗೆದ್ದಿರುವ ಅವರು ನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.
ಹೆಚ್.ಡಿ.ರೇವಣ್ಣ :
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೂರನೇ ಪುತ್ರರಾಗಿರುವ ಎಚ್.ಡಿ.ರೇವಣ್ಣ ಹಾಸನ ಜಿಲ್ಲೆ ಹೊಳೆನರಸೀಪುರದ ಜೆಡಿಎಸ್ ಅಭ್ಯರ್ಥಿ. ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ ಅವರು ತಾವು ಎದುರಿಸಿದ ಐದು ಚುನಾವಣೆಯಲ್ಲಿ ಒಂದು ಬಾರಿ ಪರಾಭವಗೊಂಡಿದ್ದರು.
ಅಜಯ್ ಸಿಂಗ್:
ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ್ ಅವರ ಪುತ್ರರಾಗಿರುವ ಅಜಯ್ ಸಿಂಗ್ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿಯಿಂದ ಎರಡನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಎದುರಿಸಿದ ಮೊದಲ ಚುನಾವಣೆಯಲ್ಲೇ ಪರಾಭವಗೊಂಡಿದ್ದರು. ಆದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಮತಗಳಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ ಅವರು ಈಗ ಮತ್ತೊಮ್ಮೆ ಅಖಾಡಕ್ಕೆ ಧುಮುಕ್ಕಿದ್ದಾರೆ.
ದಿನೇಶ್ ಗುಂಡೂರಾವ್:
ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರ ಪುತ್ರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ 5ನೇ ಬಾರಿಗೆ ಬೆಂಗಳೂರಿನ ಹೃದಯಭಾಗದಲ್ಲಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ.
1999ರಿಂದ ಸತತ ನಾಲ್ಕು ಬಾರಿ ಗೆದ್ದಿರುವ ದಿನೇಶ್ ಗುಂಡೂರಾವ್ 5ನೇ ಬಾರಿಗೂ ಸ್ಪರ್ಧಿಸಿದ್ದಾರೆ.
ಕುಮಾರ್ ಬಂಗಾರಪ್ಪ -ಮಧು ಬಂಗಾರಪ್ಪ :
ಸಹೋದರರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರವೆಂದರೆ ಶಿವಮೊಗ್ಗ ಜಿಲ್ಲೆಯ ಸೊರಬ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪನವರ ಪುತ್ರರಾಗಿರುವ ಈ ಇಬ್ಬರು ಸಹೋದರರು ಬದಲಾದ ಕಾಲಘಟ್ಟದಲ್ಲಿ ಬಿಜೆಪಿಯಿಂದ ಕುಮಾರ ಬಂಗಾರಪ್ಪ ಹಾಗೂ ಜೆಡಿಎಸ್‍ನಿಂದ ಮಧುಬಂಗಾರಪ್ಪ ಸ್ಪರ್ಧಿಸಿದ್ದಾರೆ.
ಬಸವರಾಜ ಬೊಮ್ಮಾಯಿ:
ಜನತಾ ಪರಿವಾರದ ಹಿರಿಯ ಕೊಂಡಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.