ಬೆಂಗಳೂರು,ಏ.20- ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಇಂದು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ದವಳಗಿರಿ ನಿವಾಸದಲ್ಲಿ ಎನ್.ವೈ.ಗೋಪಾಲಕೃಷ್ಣ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರನ್ನು ಪಕ್ಷದ ಬಾವುಟ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಎನ್.ವೈ.ಗೋಪಾಲಕೃಷ್ಣ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದರೆ ಛಲವಾದಿ ನಾರಾಯಣಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
2015ರಲ್ಲಿ ನಡೆದ ಬಳ್ಳಾರಿ, ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದ ಗೋಪಾಲಕೃಷ್ಣಗೆ ಈ ಬಾರಿ ಟಿಕೆಟ್ ನೀಡಿರಲಿಲ್ಲ. ಇತ್ತೀಚೆಗೆ ಬಿಡುಗಡೆಯಾಗಿದ್ದ ಕಾಂಗ್ರೆಸ್ ಪಟ್ಟಿಯಲ್ಲಿ ಈ ಕ್ಷೇತ್ರದಿಂದ ನಾಗೇಂದ್ರ ಬಾಬುಗೆ ಟಿಕೆಟ್ ಘೋಷಣೆಯಾಗಿರುವುದರಿಂದ ಅಸಮಾಧಾನಗೊಂಡ ಗೋಪಾಲ ಕೃಷ್ಣ ಬಿಜೆಪಿಯತ್ತ ಮುಖ ಮಾಡಿದ್ದರು.
ಈ ಬೆಳವಣಿಗೆಗಳ ನಡುವೆಯೇ ಗೋಪಾಲಕೃಷ್ಣ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಪಾತ್ರ ನಿರ್ಣಾಯಕವಾಗಿತ್ತು.
ಇನ್ನು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಛಲವಾದಿ ನಾರಾಯಣಸ್ವಾಮಿ ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಉಭಯ ನಾಯಕರು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕಳೆದ ಎರಡು ವರ್ಷಗಳಿಂದ ಎನ್.ವೈ.ಗೋಪಾಲಕೃಷ್ಣ ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನ ನಡೆಸಲಾಗಿತ್ತು.
ಮಾಜಿ ಸಚಿವ ಜನಾರ್ಧನ ರೆಡ್ಡಿ , ಸಂಸದ ಶ್ರೀರಾಮುಲು ಅವರ ಪ್ರಯತ್ನದಿಂದಾಗಿ ಪಕ್ಷಕ್ಕೆ ಬೇಷರತ್ತಾಗಿ ಬಂದಿದ್ದಾರೆ. ಅವರಿಗೆ ಕೂಡ್ಲಿಗಿಯಿಂದ ಟಿಕೆಟ್ ನೀಡಲಾಗುವುದು. ಅವರ ಸೇವೆಯನ್ನು ನಮ್ಮ ಪಕ್ಷ ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ 60ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ, ಬದಾಮಿಯಲ್ಲೂ ಸೋಲುವುದು ಗ್ಯಾರಂಟಿ. ವರುಣಾದಲ್ಲಿ ಅವರ ಪುತ್ರ ಕೂಡ ಪರಾಭವಗೊಳ್ಳಲಿದ್ದಾನೆ ಎಂದರು.
ಮೇ 1ರಿಂದ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸ ನಿಗದಿಯಾಗಲಿದೆ.ನಾಳೆ ಲಂಡನ್‍ನಿಂದ ಹಿಂತಿರುಗಿದ ಮೇಲೆ ರಾಜ್ಯದ ಪ್ರವಾಸದ ಪಟ್ಟಿ ನಿಗದಿಯಾಗಲಿದೆ.
ಪಕ್ಷದ ಕಾರ್ಯಕರ್ತರು ಹಾಗೂ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ಮೋದಿ ಭಾಷಣವನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಸಾಗರದಿಂದ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬೇಳೂರು ಗೋಪಾಲಕೃಷ್ಣ ಅವರ ಬಗ್ಗೆ ನಾನು ಹೇಳುವುದಿಲ್ಲ.ಬಂಡಾಯವೆದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಅವರು ಏನು ಬೇಕಾದರು ಮಾಡಲು ಸ್ವತಂತ್ರರು ಎಂದರು.
ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ನನ್ನ ಸಿದ್ದಾಂತಗಳಿಗೆ ಪಕ್ಷದಲ್ಲಿ ಗೌರವವಿಲ್ಲ.ಹಾಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಬಳ್ಳಾರಿ ಮತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಟಿಕೆಟ್ ಸಿಗದಂತೆ ಷಡ್ಯಂತರ ನಡೆಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನನಗೆ ಅತ್ಯಂತ ಆತ್ಮೀಯರು. ಮಾನವೀಯತೆ ಹೊಂದಿರುವ ವ್ಯಕ್ತಿ. ನಾನು ಉಪಸಭಾಧ್ಯಕ್ಷನಾಗಿದ್ದ ವೇಳೆ ಪೂರ್ಣ ಪ್ರಮಾಣದ ಅವಧಿ ಪೂರೈಸಲು ಅವರು ಕಾರಣ ಎಂದು ಸ್ಮರಿಸಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಂಸದ ವೀರಪ್ಪ ಮೊಯ್ಲಿ ಸೇರಿದಂತೆ ಮತ್ತಿತರರು ಬಿ ಫಾರಂ ಮಾರಾಟಕ್ಕಿಟ್ಟಿದ್ದಾರೆ. ನೆಲಮಂಗಲದಲ್ಲಿ ಐದು ಕೋಟಿಗೆ ಮಾರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಪೂರ್ಣಿಮಾ ಮಲ್ಲೇಶ್ ಕೂಡ ಬಿಜೆಪಿಗೆ ಸೇರ್ಪಡೆಯಾದರು. ಸಂಸದ ಶಿವಕುಮಾರ್ ಉದಾಸೀ, ಚಿ.ನಾ.ರಾಮು ಮತ್ತಿತರರು ಇದ್ದರು.