ನವದೆಹಲಿ, ಏ.19-ಅಕ್ರಮ ಮಾರ್ಗಗಳನ್ನು ಬಳಸಿ ತಪ್ಪು ಆದಾಯ ವಿವರ ಸಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೇತನ ವರ್ಗದ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ(ಐಟಿ) ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ.
ವೇತನ ವರ್ಗದ ತೆರಿಗೆ ಪಾವತಿದಾರರು ಐಟಿ ರಿಟನ್ರ್ಸ್(ಆದಾಯ ತೆರಿಗೆ ಸಲ್ಲಿಕೆ ಅಥವಾ ಐಟಿಆರ್) ಪ್ರಕ್ರಿಯೆಯನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಗೆ ಸಲ್ಲಿಸಲು ಆರಂಭಿಸಿರುವಾಗಲೇ ಈ ಎಚ್ಚರಿಕೆ ನೀಡಲಾಗಿದೆ.
ವಿವರ ಸಲ್ಲಿಕೆ ವೇಳೆ ಮೂಲ ಆದಾಯವನ್ನು ಮರೆ ಮಾಚುವುದು ಅಥವಾ ಉದ್ದೇಶಪೂರ್ವಕವಾಗಿ ವೇತನ ಕಡಿತಗಳ ವಿವರಗಳಲ್ಲಿ ಮಾರ್ಪಾಡು ಮಾಡುವುದು ಮತ್ತಿತ್ತರ ಅಕ್ರಮ ಮಾರ್ಗಗಳನ್ನು ಅನುಸರಿಸಿದರೆ ಕಾನೂನಿನ ಪ್ರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇಂಥ ತಪ್ಪಿಸ್ಥರು ಮತ್ತು ಕಾನೂನು ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದು ಅವರ ಉದ್ಯೋಗದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಐಟಿ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿರುವ ಕೇಂದ್ರೀಯ ಪರಿಷ್ಕರಣಾ ಕೇಂದ್ರ (ಸಿಪಿಸಿ) ಆದಾಯ ತೆರಿಗೆ ಸಲ್ಲಿಕೆ(ಐಟಿಆರ್)ಗಳನ್ನು ಸ್ವೀಕರಿಸಿ ಪರಿಶೀಲನೆಗೆ ಒಳಪಡಿಸುತ್ತದೆ. ಸಿಪಿಸಿ ಈ ಸಂಬಂಧ ವೇತನ ವರ್ಗದ ತೆರಿಗೆದಾರರಿಗೆ ಮಧ್ಯವರ್ತಿಗಳು ಮತ್ತು ತೆರಿಗೆ ವಂಚಕರ ಬಲೆಗೆ ಬೀಳದಂತೆ ನಿರ್ದಿಷ್ಟ ಸಲಹೆಗಳನ್ನು ಮಾಡಿದೆ.