![AnanthKumar](http://kannada.vartamitra.com/wp-content/uploads/2018/03/AnanthKumar-506x381.jpg)
ಬೆಂಗಳೂರು,ಏ.19- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಒಂದು ಡಜನ್ಗೂ ಅಧಿಕ ಮಹಿಳೆಯರಿಗೆ ಟಿಕೆಟ್ ನೀಡಲಿದ್ದೇವೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.
ಈಗಾಗಲೇ ಪ್ರಕಟಗೊಂಡ ಎರಡು ಪಟ್ಟಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಮೊದಲ ಪಟ್ಟಿಯಲ್ಲಿ ಶಾಸಕಿ ಶಶಿಕಾಂತ್ ಜೊಲ್ಲೆಗೆ ಟಿಕೆಟ್ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.
ನಾವು ಇನ್ನು ಅಂತಿಮ ಪಟ್ಟಿಯನ್ನು ಪ್ರಕಟಗೊಳಿಸಿಲ್ಲ. ಮೂರನೇ ಪಟ್ಟಿ ಪ್ರಕಟವಾಗುವವರೆಗೂ ಕಾದು ನೋಡಿ. ಈ ಬಾರಿ ಒಂದು ಡಜನ್ಗೂ ಅಧಿಕ ಮಹಿಳೆಯರಿಗೆ ಟಿಕೆಟ್ ನೀಡಲಿದ್ದೇವೆ. ಮಹಿಳೆಯರಿಗೆ ರಾಜಕೀಯದಲ್ಲಿ ಆದ್ಯತೆ ನೀಡುವ ಬಗ್ಗೆ ಕಾಂಗ್ರೆಸ್ನಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಬ್ಕಾ ಸಾಥ್ ಸಬ್ ಕಾ ವಿಕಾಸ್ ಹಾಗೂ ಯಡಿಯೂರಪ್ಪನವರ ಸರ್ವರಿಗೂ ಸಮಪಾಲು , ಸರ್ವರಿಗೂ ಸಮಬಾಳು ಎಂಬ ತತ್ವದಡಿ ಟಿಕೆಟ್ ನೀಡಿದ್ದೇವೆ. ಎಲ್ಲ ವರ್ಗದವರಿಗೂ ಸಮಾನಾಗಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಸೋಲುವ ಭೀತಿಯಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅವರ ಸುಳ್ಳುಗಳನ್ನು ಯಾರೊಬ್ಬರೂ ನಂಬಬಾರದು. ಸಾಲು ಸಾಲು ಚುನಾವಣೆ ಸೋತರೂ ಅವರಿಗೆ ಇನ್ನು ಬುದ್ದಿ ಬಂದಿಲ್ಲ ಎಂದು ಹರಿಹಾಯ್ದರು.