ನವದೆಹಲಿ, ಏ.19-ಸಂಪರ್ಕ ಕಳೆದುಕೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಜಿಸ್ಯಾಟ್-6ಎ ಉಪಗ್ರಹ ಕೊನೆಗೂ ಪತ್ತೆಯಾಗಿದ್ದು, ಇದರೊಂದಿಗೆ ಮರುಸಂರ್ಪಕ ಸಾಧಿಸುವ ಪ್ರಯತ್ನಗಳು ಮುಂದುವರಿದಿದೆ.
ಇಸ್ರೋ ಅಧ್ಯಕ್ಷ ಕೆ.ಶಿವನ್ ಜಿಸ್ಯಾಟ್-6ಎ ಸ್ಯಾಟಿಲೈಟ್ ಪತ್ತೆಯಾಗಿರುವ ವಿಷಯವನ್ನು ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ.
ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುವಾಗ ಕೈಕೊಳ್ಳುವ ಅತ್ಯಂತ ಕ್ಲಿಷ್ಟಕರ ಏರ್ಪಾಡು ವೇಳೆ ಈ ಉಪಗ್ರಹ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಇದೀಗ ಇದು ಪತ್ತೆಯಾಗಿರುವುದರಿಂದ ಅತಿ ಶೀಘ್ರದಲ್ಲೇ ಮತ್ತೆ ಸಂಪರ್ಕ ಸಾಧಿಸುವ ವಿಶ್ವಾಸವನ್ನು ಇಸ್ರೋ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.
ಈ ಉಪಗ್ರಹ ಉಡಾವಣೆ ಯಶಸ್ವಿಯಾಗಿತ್ತು. ಉಡಾವಣಾ ವಾಹಕ ಅಂತರಿಕ್ಷ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುತ್ತದೆ. ಇದು ಅತ್ಯಂಕ ಕ್ಲಿಷ್ಟಕರ ಮತ್ತು ಸಂಕೀರ್ಣ ಹಂತ. ಈ ಹಂತದ ಬಳಿಕ ಉಪಗ್ರಹ ತಾನು ತಲುಪಬೇಕಾದ ಮಾರ್ಗವನ್ನು ಕಂಡುಕೊಳ್ಳುತ್ತದೆ. ಇಲ್ಲಿ ಕೆಲವು ಸಮಸ್ಯೆಗಳು ಇದ್ದರೂ ನಿಯಂತ್ರಣ ಕೇಂದ್ರದಿಂದ ಸರಿಪಡಿಸಬಹುದು. ಆ ನಂತರ ಮುಂದಿನ ಪಯಣಕ್ಕೆ ಉಪಗ್ರಹ ಸ್ವಯಂ ವ್ಯವಸ್ಥೆ ಮಾಡಿಕೊಳ್ಳುತ್ತದೆ ಎಂದು ಶಿವನ್ ವಿವರಿಸಿದ್ದಾರೆ.
ಚಂದ್ರಯಾನ-2 ಉಡಾವಣೆ ಗುರಿ : ಈ ವರ್ಷ ಇಸ್ರೋ ಕೆಲವು ಮಹತ್ವದ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪ್ರಕಟಿಸಿದ ಅವರು, ಅಕ್ಟೋಬರ್-ನವೆಂಬರ್‍ನಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ್-2ಗಾಗಿ ಸಕಲ ಸಿದ್ದತೆ ಕೈಗೊಂಡಿದೆ ಎಂದರು.
ಮುಂದಿನ ವರ್ಷ ಸೂರ್ಯನತ್ತ ಗುರಿ ಹೊಂದಿರುವ ಇಸ್ರೋ 2019ರಲ್ಲಿ ಆದಿತ್ಯ-ಎಲ್1 ನೌಕೆ ಉಡಾವಣೆಯಾಗಲಿದೆ ಎಂದು ಹೇಳಿದರು.