![gov](http://kannada.vartamitra.com/wp-content/uploads/2018/04/gov-373x381.png)
ಬೆಂಗಳೂರು,ಏ.19-ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಭಾರತದ ಚುನಾವಣಾ ಆಯೋಗ ನಿರುಪೇಕ್ಷಣೆಯ ಹಸಿರು ನಿಶಾನೆ ತೋರಿದೆ.
ರಾಜ್ಯ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೇತನ ಪರಿಷ್ಕರಣೆ ಬಗ್ಗೆ ರಾಜ್ಯ ಸರ್ಕಾರ ಚುನಾವಣಾ ಆಯೋಗದ ಅನುಮತಿ ಕೋರಿತ್ತು.
6ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಯೋಗ ಆಕ್ಷೇಪಣಾ ರಹಿತ(ನೋ ಆಬ್ಜೆಕ್ಷನ್ ಲೆಟರ್) ಪತ್ರವನ್ನು ನೀಡಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರ ಪತ್ರಕ್ಕೆ ಪ್ರತಿಯಾಗಿ ಆಯೋಗ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಕ್ಷೇಪವೇನೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಭಾರತದ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಅಶ್ವಿನ್‍ಕುಮಾರ್ ಮೊಹಲ್ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನಕ್ಕೆ ತೆರೆಬಿದ್ದಿದೆ.
ರಾಜ್ಯ ಹಣಕಾಸು ಇಲಾಖೆ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಫಿಟ್‍ಮೆಂಟ್ ಕೋಸ್ಟಕ ಮತ್ತು ಆದೇಶಗಳನ್ನು ಹೊರಡಿಸುವ ಹಾದಿ ಸುಗಮವಾದಂತಾಗಿದೆ.
ರಾಜ್ಯ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು 2017ರ ಜುಲೈ 1ರಿಂದಲೇ ಪರಿಷ್ಕರಿಸಲಾಗಿದೆ. ಆದರೆ ಪ್ರಸ್ತುತ ಏ.1ರಿಂದ ಅನ್ವಯವಾಗುವಂತೆ ಪರಿಷ್ಕರಣೆಯ ಆರ್ಥಿಕ ಸೌಲಭ್ಯಗಳನ್ನು ಸರ್ಕಾರಿ ನೌಕರರಿಗೆ ನೀಡಲು ಕಳೆದ ಮಾ.1ರಂದೇ ಸರ್ಕಾರಿ ಆದೇಶವನ್ನು ಹೊರಡಿಸಲಾಗಿತ್ತು.
ಸರ್ಕಾರ ಹೊರಡಿಸಿದ ಆದೇಶಕ್ಕೆ ಮಾ.2ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಘಟನೋತ್ತರ ಅನುಮೋದನೆ ದೊರೆತ್ತಿತ್ತು.
ವೇತನ ಪರಿಷ್ಕರಣೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವರವಾದ ನಿಯಮಗಳು ಫಿಟ್‍ಮೆಂಟ್ ಕೋಸ್ಟಕ ಮತ್ತು ಆದೇಶಗಳನ್ನು ಭಾರತೀಯ ಚುನಾವಣಾ ಆಯೋಗದಿಂದ ನಿರೀಕ್ಷಣಾ ಪತ್ರ ದೊರೆತ ಕೂಡಲೇ ಹೊರಡಿಸುವುದಾಗಿ ಸರ್ಕಾರ ಹೇಳಿತ್ತು.ವೇತನ ಶ್ರೇಣಿ ಪರಿಷ್ಕರಣೆಗೆ ಸಂಬಂಧಿಸಿದ ಆದೇಶವನ್ನು ಈಗಾಗಲೇ ರಾಜ್ಯ ಪತ್ರದಲ್ಲೂ ಪ್ರಕಟಣೆ ಹೊರಡಿಸಲಾಗಿದೆ.