ಬೆಂಗಳೂರು,ಏ.19-ರಾಜ್ಯ ಬಿಜೆಪಿ ಘಟಕದೊಳಗೆ ಹೊತ್ತಿಕೊಂಡಿರುವ ಭಿನ್ನಮತದ ಜ್ವಾಲೆ ಶಮನವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.
ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಸಮರ ಸಾರಿರುವ ಟಿಕೆಟ್ ವಂಚಿತರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತೇವೆ ಎಂದು ಸೆಡ್ಡು ಹೊಡೆದಿರುವುದರಿಂದ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದ್ದಾರೆ.
ಭಿನ್ನಮತೀಯರನ್ನು ಪಕ್ಷದ ನಾಯಕರು ಮನವೊಲಿಸುವ ಕಸರತ್ತು ನಡೆಸುತ್ತಿದ್ದರಾದರೂ ಯಾವುದೇ ಫಲ ಕೈ ಕೊಟ್ಟಿಲ್ಲ. ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದರೆ ಅಭ್ಯರ್ಥಿಗಳಿಗೆ ಹೊಡೆತ ಬೀಳಲಿದೆ ಎಂದು ಎಲ್ಲರಲ್ಲೂ ಕಾಡುತ್ತಿದೆ.
ಚುನಾವಣೆಗೂ ಮುನ್ನವೇ ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿ ಗೋಪಾಲ ಕೃಷ್ಣ ಬೇಳೂರು ಪಕ್ಷದ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.
ತಾವು ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ.
ಇತ್ತ ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ಟಿಕೆಟ್ ಸಿಗದೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸೋಮಣ್ಣ ಬೇವಿನಮರದ್ ಅಧಿಕೃತ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ವಿರುದ್ಧ ತೊಡೆ ತಟ್ಟಿರುವುದರಿಂದ ಬಿಜೆಪಿಗೆ ಉಗಳಲು ಆಗದ ನುಂಗಲು ಆಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ದಾವಣಗೆರೆ ಜಿಲ್ಲೆ ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಬಸವರಾಜ್ ನಾಯಕ್ ಆಕಾಂಕ್ಷಿಯಾಗಿದ್ದರು. ಈಗ ಬಿಡುಗಡೆಯಾಗಲಿರುವ ಮೂರನೇ ಪಟ್ಟಿಯಲ್ಲಿ ಬಿಜೆಪಿಯು ಈ ಕ್ಷೇತ್ರದಿಂದ ಅಶೋಕ್ ನಾಯಕ್ ಎಂಬುವರಿಗೆ ಮಣೆ ಹಾಕಲು ಮುಂದಾಗಿದೆ.
ಟಿಕೆಟ್ ಕೈ ತಪ್ಪುವುದು ಖಚಿತವಾಗುತ್ತಿದ್ದಂತೆ ಬಸವರಾಜ ನಾಯಕ್ ತಮ್ಮ ಗಾಢ್‍ಫಾದರ್ ಹಾಗೂ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮೂಲಕ ಟಿಕೆಟ್‍ಗಾಗಿ ಲಾಬಿ ಆರಂಭಿಸಿದ್ದಾರೆ.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ , ಬಸವರಾಜ್ ನಾಯಕ್ ಅವರನ್ನು ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲೂ ಭಿನ್ನಮತ ಕುದಿಯುತ್ತಿದೆ.
ಮಾಜಿ ಶಾಸಕ ನೆ.ಲ.ನರೇಂದ್ರ ಬಾಬುಗೆ ಟಿಕೆಟ್ ನೀಡಿರುವುದರಿಂದ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಬಿಬಿಎಂಪಿ ಮಾಜಿ ಸದಸ್ಯ ಎಂ.ನಾಗರಾಜ್ ಹಾಗೂ ಮಾಜಿ ಉಪಮೇಯರ್ ಹರೀಶ್ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಕೆಂಡ ಕಾರಿದ್ದಾರೆ.
ನರೇಂದ್ರ ಬಾಬು ಟಿಕೆಟ್ ನೀಡಿದ್ದೇ ಆದರೆ ಮಹಾಲಕ್ಷ್ಮಿ ಲೇಔಟ್‍ನ ಮಂಡಲದ ಎಲ್ಲ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ನೀಡಿದ್ದಾರೆ.
ಗದಗದಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಬಿಜೆಪಿಯಿಂದ ಟಿಕೆಟ್ ಪಡೆದಿರುವ ಅನಿಲ್ ಮೆಣಸಿನಕಾಯಿ ಅವರ ವಿರುದ್ಧ ಬಂಡಾಯ ಸಾರಿದ್ದಾರೆ.
ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಅಧಿಕೃತ ಅಭ್ಯರ್ಥಿಗಳ ವಿರುದ್ದ ಸಮರ ಸಾರಿರುವುದರಿಂದ ಕಮಲ ವಿಲವಿಲನ ಎನ್ನುವಂತಾಗಿದೆ.