ವಿಧಾನಸಭೆಗೆ ಸಂಬಂಧಿಸಿದಂತೆ 450ಕ್ಕಿಂತ ಹೆಚ್ಚು ಮತದಾರರಿರುವ ವಸತಿ ಸಮುಚ್ಚಯಗಳಲ್ಲೇ ಮತಗಟ್ಟೆ ಸ್ಥಾಪನೆ

ಬೆಂಗಳೂರು, ಏ.19-ರಾಜ್ಯ ವಿಧಾನಸಭೆಗೆ ಸಂಬಂಧಿಸಿದಂತೆ 450ಕ್ಕಿಂತ ಹೆಚ್ಚು ಮತದಾರರಿರುವ ವಸತಿ ಸಮುಚ್ಚಯಗಳಲ್ಲೇ ಮತಗಟ್ಟೆ ಸ್ಥಾಪಿಸುವ ಬಗ್ಗೆ ಭಾರತದ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ.

ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಆಯೋಗ ವಸತಿ ಸಮುಚ್ಚಯದಲ್ಲೂ ಮತಗಟ್ಟೆ ತೆಗೆಯಲು ಪರಿಶೀಲನೆ ಮಾಡುತ್ತಿದೆ.

ಬೆಂಗಳೂರಿನಲ್ಲಿ ವಸತಿ ಸಮುಚ್ಚಯಗಳು ಹೆಚ್ಚಾಗಿದ್ದು, ಮತದಾನದ ಪ್ರಮಾಣ ಹೆಚ್ಚಾಗಬೇಕೆಂಬ ಉದ್ದೇಶದಿಂದ ಆಯೋಗ ಹೊಸ ಮತಗಟ್ಟೆಗಳನ್ನು ತೆರೆಯಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಹಿಳಾ ಮತದಾರರೇ ಹೆಚ್ಚಿರುವ ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳನ್ನಾಗಿ ಸ್ಥಾಪಿಸಿ ಮಹಿಳಾ ಸಿಬ್ಬಂದಿಯನ್ನೇ ಮತದಾನ ದಿನದಂದು ನಿಯೋಜಿಸಲು ಈಗಾಗಲೇ ತೀರ್ಮಾನಿಸಿದೆ.

ಬೆಂಗಳೂರಿನ 15 ಮತಗಟ್ಟೆಗಳಲ್ಲಿ ಎಂ-3 ಹೊಸ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲಿದೆ. ಇಂದು ಈ ಹೊಸ ಮತಯಂತ್ರಗಳನ್ನು ಬೆಂಗಳೂರಿಗೆ ತರಲಾಗಿದೆ.

ಇದುವರೆಗೂ ಬಳಸುತ್ತಿದ್ದ ಮತಯಂತ್ರಗಳಿಗಿಂತ ತೂಕದ ಪ್ರಮಾಣದಲ್ಲೂ ಕಡಿಮೆಯಾಗಿರುವುದಲ್ಲದೆ, ಗರಿಷ್ಠ 350 ಅಭ್ಯರ್ಥಿಗಳಿದ್ದರೂ ಒಂದೇ ಮತ ಯಂತ್ರವನ್ನು ಬಳಸಲು ಸಾಧ್ಯವಾಗುತ್ತದೆ. ಈ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಲೋಪದೋಷ ಕಂಡುಬರದಿದ್ದರೆ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಎಂ-3 ಮತಯಂತ್ರಗಳನ್ನೇ ಬಳಸುವ ಬಗ್ಗೆಯೂ ಆಯೋಗ ಗಂಭೀರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯ ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿರುವ ಉತ್ತರಪ್ರದೇಶದ 10 ಮಂದಿ ಐಎಎಸ್ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ