ನವದೆಹಲಿ, ಏ.19-ಕೇಂದ್ರೀಯ ತನಿಖಾ ದಳದ(ಸಿಬಿಐ) ನ್ಯಾಯಾಧೀಶ ಬಿ.ಎಚ್.ಲೋಯ ಅವರ ನಿಗೂಢ ಸಾವು ಪ್ರಕರಣದ ಸ್ವತಂತ್ರ ತನಿಖೆಗೆ ಕೋರಿದ್ದ ಅರ್ಜಿಗಳನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅವರದು ಸಹಜ ಸಾವು ಎಂದು ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಿಲ್ಲ ಎಂಬುದನ್ನು ಒತ್ತಿ ಹೇಳಿದೆ.
ಲೋಯ ಅವರ ಶಂಕಾಸ್ಪದ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿ ಸುಪ್ರೀಂಕೋರ್ಟ್ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಅರ್ಜಿಗಳನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿ ಲೋಯ ಅವರ ಸಾವು ಕುರಿತು ಈಗಾಗಲೇ ನಾಲ್ವರು ನ್ಯಾಯಾಧೀಶರು ನೀಡಿರುವ ಹೇಳಿಕೆಗಳನ್ನು ಅನುಮಾನಿಸಲು ಸಾಧ್ಯವಿಲ್ಲ. ಬಾಂಬೆ ಹೈಕೋರ್ಟ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡುವ ಮೂಲಕ ನ್ಯಾಯಾಂಗವನ್ನು ಹಗರಣಕ್ಕೆ ಒಳಪಡಿಸಲು ಯತ್ನಗಳು ನಡೆದಿವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾ. ಲೋಯ ಅವರದ್ದು ಸಹಜ ಸಾವು ಎಂಬುದು ದಾಖಲೆಪತ್ರಗಳು ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಯಿಂದ ಸಾಬೀತಾಗಿದೆ. ಹೀಗಾಗಿ ನಾಲ್ವರು ನ್ಯಾಯಾಧೀಶರು ಈ ಸಂಬಂಧ ನೀಡಿರುವ ತೀರ್ಪುಗಳನ್ನು ಅನುಮಾನಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಅರ್ಜಿಗಳು ನ್ಯಾಯಾಂಗ ವಿರುದ್ಧ ಅಕ್ರಮಣ ನಡೆಸಲು ಯತ್ನಿಸಿರುವುದು ಸ್ಪಷ್ಟವಾಗಿದೆ. ಈ ಅರ್ಜಿ ಸ್ವಾರ್ಥ ಉದ್ದೇಶದಿಂದ ಕೂಡಿರುವುದು ಸಹ ಸ್ಪಷ್ಟವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ರಾಜಕೀಯವಾಗಿ ಭಾರೀ ಮಹತ್ವ ಪಡೆದಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಮೂರ್ತಿ ಲೋಯ 2014ರಲ್ಲಿ ನಿಗೂಢವಾಗಿ ಮೃತಪಟ್ಟರು. ಲೋಯ ಅವರದ್ದು ಸಹಜ ಸಾವಲ್ಲ. ಅದೊಂದು ಕೊಲೆ ಎಂದು ಅವರ ಸಹೋದರಿ ಶಂಕೆ ವ್ಯಕ್ತಪಡಿಸಿದ್ದರು. ಈ ಪ್ರಕರಣ ದೇಶಾದ್ಯಂತ ಸಾಕಷ್ಟು ಕುತೂಹಲ ಕೆರಳಿಸಿತ್ತು.