ವಾಷಿಂಗ್ಟನ್, ಏ.19-ದೇಶೀಯ ಒಟ್ಟು ಉತ್ಪನ್ನ(ಜಿಡಿಪಿ)ಕ್ಕೆ ಭಾರತವು ಅಧಿಕ ಸಾಲ ಮಟ್ಟವನ್ನು ಹೊಂದಿದೆಯಾದರೂ, ತನ್ನ ಸೂಕ್ತ ನೀತಿಗಳಿಂದ ಅದನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮೆಚ್ಚುಗೆ ಸೂಚಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಎಫ್ ಹಣಕಾಸು ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಅಬ್ಡೆಲ್ ಸೇನ್ಹಡ್ಜಿ, 2017ರಲ್ಲಿ ಭಾರತದ ಸಾಲ ಮಟ್ಟ ಜಿಡಿಪಿಯಲ್ಲಿ ಶೇ.70ರಷ್ಟಿದೆ. ಆದರೂ ಸೂಕ್ತ ನೀತಿಗಳ ಮೂಲಕ ಆ ಪ್ರಮಾಣವನ್ನು ತಗ್ಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಪ್ರಶಂಸಿಸಿದರು.
ಜಾಗತಿಕ ಸಾಲ ಮಟ್ಟಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಮುಂದುವರಿದ ಮತ್ತು ಹೊರಹೊಮ್ಮುತ್ತಿರುವ ಮಾರುಕಟ್ಟೆ ಆರ್ಥಿಕತೆಗಳಲ್ಲಿ ಸಾರ್ವಜನಿಕ ಸಾಲ ಮಟ್ಟವು ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆರ್ಥಿಕತೆ ಏರಿಳಿತಗಳನ್ನು ಹೆಚ್ಚಿಸುವಂಥ ನೀತಿಗಳನ್ನು ಆಯಾ ದೇಶಗಳು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಐಎಂಎಫ್ ಸಲಹೆ ಮಾಡಿದೆ.