ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಮತ್ತೆ ಕಾನೂನು ಸಮರಕ್ಕೆ ಎರಡೂ ರಾಷ್ಟ್ರಗಳು ಸಜ್ಜಾಗಿವೆ:

ನವದೆಹಲಿ/ಇಸ್ಲಾಮಾಬಾದ್, ಏ.19-ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆಪಾದನೆಗಳಿಗಾಗಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತ ನೌಕಾ ಪಡೆಯ ಮಾಜಿ  ಅಧಿಕಾರಿ ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಮತ್ತೆ ಕಾನೂನು ಸಮರಕ್ಕೆ ಎರಡೂ ರಾಷ್ಟ್ರಗಳು ಸಜ್ಜಾಗಿವೆ.
ನೆದರ್‍ಲೆಂಡ್ಸ್‍ನ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ(ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್-ಐಸಿಜೆ)ದಲ್ಲಿ ಈ ಗಂಭೀರ ಪ್ರಕರಣದ ಬಗ್ಗೆ ಸಂಘರ್ಷಕ್ಕೆ ಭಾರತ ಮತ್ತು ಪಾಕ್ ಸಿದ್ದತೆ ನಡೆಸಿವೆ.
ಈಗಾಗಲೇ ಐಸಿಜೆ ಮುಂದೆ ಏಪ್ರಿಲ್ 17ರಂದು ಭಾರತ ತನ್ನ ವಾದಗಳ ಹೊಸ ಪ್ರತಿಗಳನ್ನು ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಜುಲೈ 17ರ ಹೊತ್ತಿಗೆ ತನ್ನ ಪ್ರತಿ ವಾದಗಳ ದಾಖಲೆಗಳನ್ನು ಸಲ್ಲಿಸಲಿದೆ. ಪಾಕಿಸ್ತಾನದ ರಿಜಾಯಿಂಡರ್(ಹಿಂದಿನ ದಾಖಲೆಗಳಿಗೆ ಹೊಸ ಅಂಶಗಳ ಸೇರ್ಪಡೆ) ಸಲ್ಲಿಕೆ ನಂತರ ಜಾಧವ್ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮತ್ತೊಮ್ಮೆ ವಿಚಾರಣೆಗೆ ಬರಲಿದೆ.
ಈ ಪ್ರಕರಣದ ಬೆಳವಣಿಗೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಾಕಿಸ್ತಾನದ ಅಟಾರ್ನಿ ಜನರಲ್ ರಿಜಾಯಿಂಡರ್‍ನ ಪ್ರತಿಯನ್ನು ಇನ್ನೆರಡು ದಿನಗಳಲ್ಲಿ ಸ್ವೀಕರಿಸಲಿದ್ದಾರೆ ಎಂದು ಇಸ್ಲಾಮಾಬಾದ್‍ನಲ್ಲಿ ಮಾಧ್ಯಮಗಳು ವರದಿ ಮಾಡಿವೆ.
ಆರಂಭಿಕ ಹಂತದಲ್ಲಿ ಪಾಕಿಸ್ತಾನದ ಪರ ಈ ಪ್ರಕರಣದ ವಕಾಲತ್ತು ವಹಿಸಿದ್ದ ಖಾವರ್ ಖುರೇಷಿ, ಜಾಧವ್ ಕೇಸ್‍ನಲ್ಲಿ ಮತ್ತೆ ವಾದ ಮಂಡಿಸುವ ಸಾಧ್ಯತೆ ಇದೆ.
ಗೂಢಚಾರಿಕೆ ಮತ್ತು ಭಯೋತ್ಪಾದನೆ ಆಪಾದನೆಗಳಿಗಾಗಿ ಕಳೆದ ವರ್ಷ ಏಪ್ರಿಲ್‍ನಲ್ಲಿ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ 47 ವರ್ಷದ ಜಾಧವ್ ಅವರಿಗೆ ಮರಣದಂಡನೆ ವಿಧಿಸಿತ್ತು. ಇದನ್ನು ವಿರೋಧಿಸಿ ಮೇನಲ್ಲಿ ಭಾರತವು ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೆರಿತ್ತು. ವಿಚಾರಣೆ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ 10 ನ್ಯಾಯಮೂರ್ತಿಗಳ ಪೀಠವು ಮುಂದಿನ ನ್ಯಾಯ ನಿರ್ಣಯದ ತನಕ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸದಂತೆ ಪಾಕಿಸ್ತಾನಕ್ಕೆ ಸ್ಪಷ್ಟ ಸೂಚನೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ