ಮೈಸೂರು,ಏ.19- ಬಾದಮಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಅಭ್ಯರ್ಥಿ ಆಯ್ಕೆಯಾಗಿದ್ದರೂ ಸಹ ಬಿ ಫಾರಂ ನೀಡಿಲ್ಲ ಹಾಗಾಗಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ನಡೆಸಿದ ಮಾತುಕತೆ ಫಲ ನೀಡಿಲ್ಲ. ತಡರಾತ್ರಿ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆ.ಸಿ.ವೇಣುಗೋಪಾಲ್, ಜಿ.ಪರಮೇಶ್ವರ್ ಅವರೊಂದಿಗೆ ನಡೆದ ಮಾತುಕತೆ ಅಪೂರ್ಣಗೊಂಡಿದೆ. ಸಿದ್ದರಾಮಯ್ಯ ಅರ್ಧಕ್ಕೆ ಸಭೆಯಿಂದ ಹೊರಬಂದರೆಂದು ತಿಳಿದುಬಂದಿದೆ. ಬಾದಾಮಿ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದರೂ ಬಿ ಫಾರಂ ನೀಡಿದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತೆಂದೂ ಆದರೆ ಅಸಮಾಧಾನದಿಂದ ಎದ್ದು ಹೊರ ನಡೆದರೆಂದು ನಂಬಲರ್ಹ ಮೂಲಗಳು ತಿಳಿಸಿವೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಬಗ್ಗೆ ಚರ್ಚಿಸಿಲ್ಲ. ಅಲ್ಲಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ದೃಢವಾಗಿಲ್ಲ. ಚುನಾವಣೆಯ ಪ್ರಚಾರ ಸಂಬಂಧ ನಿನ್ನೆ ರಾತ್ರಿ ವೇಣುಗೋಪಾಲ್ ಹಾಗೂ ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಲಾಯಿತು ಎಂದು ಹೇಳಿ ಪ್ರಚಾರಕ್ಕೆ ತೆರೆ ಎಳೆದರು.