ಬೆಂಗಳೂರು,ಏ.19-ದಲಿತರು, ಮಹಿಳೆಯರು ಹಾಗೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬರಲಿರುವ ವಿಧಾನಸಭೆ ಚುನಾವಣೆಯನ್ನು ಕಿತ್ತು ಹಾಕಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಛತ್ತೀಸ್ಗಢ ಮುಖ್ಯಮಂತ್ರಿ ಡಾ.ರಮಣಸಿಂಗ್ ಜನತೆಗೆ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗಗಳ ವಿರೋಧಿಯಾಗಿದೆ. ಈ ಸರ್ಕಾರವನ್ನು ತೊಲಗಿಸಿ ಅಭಿವೃದ್ದಿಪರವಾದ ಬಿಜೆಪಿಗೆ ಮತ ಹಾಕುವಂತೆ ಕರೆ ಕೊಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳ ಅವಧಿಯಲ್ಲಿ ಛತ್ತೀಸ್ಗಢದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ದಿ ಹೊಂದುತ್ತಿದೆ. ರೈಲ್ವೆ, ವಿಮಾನಯಾನ, ದೂರಸಂಪರ್ಕ ಸೇರಿದಂತೆ ನಾವು ಪ್ರತಿಯೊಂದರಲ್ಲೂ ಮುನ್ನಡೆಯುತ್ತಿದ್ದೇವೆ.ಕರ್ನಾಟಕ ಕೂಡ ಅದೇ ರೀತಿ ಅಭಿವೃದ್ಧಿ ಹೊಂದಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 500 ಮೆಗಾ ವ್ಯಾಟ್ ವಿದ್ಯುತ್ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಯಿತು. ನಮ್ಮ ಭೂಮಿ ಮತ್ತು ನೀರನ್ನು ನೀಡಿತ್ತು.
ಆದರೆ ಈ ಸರ್ಕಾರ ಅದನ್ನು ಮುಂದುವರೆಸುವ ಇಚ್ಛಾಶಕ್ತಿ ತೋರಲಿಲ್ಲ. ಇದು ರಾಜ್ಯಕ್ಕೆ ಆದ ನಷ್ಟ ಎಂದು ರಮಣ್ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಅವಧಿಯಲ್ಲಿ ರಾಜ್ಯದ ಜನತೆಗೆ ಯಡಿಯೂರಪ್ಪನವರು ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದರು. ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ, ಶೂನ್ಯ ದರದಲ್ಲಿ ರೈತರಿಗೆ ಸಾಲ, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹೆಚ್ಚಳ, ಹಿರಿಯ ನಾಗರಿಕರಿಗೆ ಮಾಶಾಸನ ಏರಿಕೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಿದ್ಯಾರ್ಥಿವೇತನ ಹೆಚ್ಚಳ ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದರು ಎಂದು ವಿವರಿಸಿದರು.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ:
2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಇಂದು ನಾವು ಹದಿನಾರು ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಹಾಗೂ 6 ರಾಜ್ಯಗಳಲ್ಲಿ ಮೈತ್ರಿಯೊಂದಿಗೆ ಸರ್ಕಾರ ರಚನೆ ಮಾಡಿದ್ದೇವೆ. ದೇಶದ ಒಟ್ಟು ರಾಜ್ಯಗಳ ಪೈಕಿ ಶೇ.75ರಷ್ಟು ಆಡಳಿತ ನಡೆಸುತ್ತಿದ್ದೇವೆ.
2024ರ ನಂತರವೇ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಯೋಜನೆ ಮಾಡಬೇಕು. ಪ್ರಧಾನಿ ನರೇಂದ್ರಮೋದಿ ಒಂದೇ ಒಂದು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಆಡಳಿತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಯಾವ ಕಾರಣಕ್ಕಾಗಿ ದೇಶದ ಜನತೆ ಅಧಿಕಾರಕ್ಕೆ ತರಬೇಕೆಂದು ಪ್ರಶ್ನಿಸಿದರು.
ಭೇಟಿ ಬಚಾವೊ, ಸ್ವಚ್ಛ ಭಾರತ್ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಒಂದೆರಡು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಈ ವರ್ಷದ ಅಂತ್ಯಕ್ಕೆ ಛತ್ತೀಸ್ಘಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನಾವು ಸತತ 4ನೇ ಬಾರಿಗೆ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಂಡರೂ ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯದ ಜನತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದರಲ್ಲಿ ಅನುಮಾನ ಇಲ್ಲ ಎಂದರು.
ಸಿದ್ದರಾಮಯ್ಯನಿಗೆ ತಿರುಗೇಟು:
ಛತ್ತೀಸ್ಘಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2015ರಿಂದ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಜನರಿಗೆ ಒಂದು ರೂ. ದರದಲ್ಲಿ ಅಕ್ಕಿ, ಉಚಿತವಾಗಿ ಎರಡು ಕೆ.ಜಿ ಉಪ್ಪು , 5 ಕೆಜಿ ಕಡ್ಲೆಬೇಳೆಯನ್ನು ವಿತರಣೆ ಮಾಡುತ್ತಿದ್ದೇವೆ. ಈಗಲೂ ಇದು ಶೇ.100ಕ್ಕೆ ನೂರರಷ್ಟು ಭ್ರಷ್ಟಾಚಾರ ರಹಿತವಾದ ಯೋಜನೆಯಾಗಿದೆ. ಇದನ್ನು ಇತರೆ ರಾಜ್ಯಗಳು ಅನುಸರಿಸುತ್ತಿವೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.
ಇಂದು ಯಡಿಯೂರಪ್ಪನವರು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅವರಿಗೆ ಶುಭ ಕೋರಲು ಇಲ್ಲಿಗೆ ಬಂದಿದ್ದೇನೆ. ಅಗತ್ಯವಿದ್ದರೆ ನಾನು ಕರ್ನಾಟಕಕ್ಕೆ ಬಂದು ಪಕ್ಷದ ಪರ ಪ್ರಚಾರ ನಡೆಸುವುದಾಗಿ ಹೇಳಿದರು.
ಎಸ್ಸಿ-ಎಸ್ಟಿ ಕಾಯ್ದೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ತೀರ್ಪಿನ ವಿರುದ್ಧ ಈಗಾಗಲೇ ಛತ್ತೀಸ್ಘಡ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಸೇರಿದಂತೆ ಅನೇಕ ಕಡೆ ಸುಗ್ರೀವಾಜ್ಞೆ ತರಲು ಚಿಂತಿಸಲಾಗಿದೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.