ಬಾಗ್ದಾದ್, ಏ.19-ಜಗತ್ತಿನ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ಸೇರಿದ 300ಕ್ಕೂ ಹೆಚ್ಚು ಉಗ್ರರಿಗೆ ಇರಾಕ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವವರಲ್ಲಿ ವಿವಿಧ ದೇಶಗಳಿಗೆ ಸೇರಿದ ಐಎಸ್ ಮಹಿಳಾ ಭಯೋತ್ಪಾದಕಿಯರೂ ಇದ್ದಾರೆ.
ರಾಜಧಾನಿ ಬಾಗ್ದಾದ್ ಮತ್ತು ಮೊಸುಲ್ ನಗರಗಳ ಎರಡು ಕೋರ್ಟ್‍ಗಳಲ್ಲಿ ಐಎಸ್ ಉಗ್ರರ ವಿಚಾರಣೆಗಳನ್ನು ನಡೆಸಿದ ನ್ಯಾಯಾಧೀಶರು ನೇಣಿಗೇರಿಸುವ ಶಿಕ್ಷೆ ಘೋಷಿಸಿದ್ದಾರೆ.
ಈ ಎರಡೂ ನ್ಯಾಯಾಲಯಗಳಲ್ಲಿ ಮುಖ್ಯವಾಗಿ ವಿದೇಶೀಯರು ಮತ್ತು ಮಹಿಳಾ ಉಗ್ರಗಾಮಿಗಳ ವಿಚಾರಣೆಗಳನ್ನು ನಡೆಸಲಾಯಿತು. ಶಿಕ್ಷೆಗೆ ಒಳಗಾದ ಮಹಿಳೆಯರಲ್ಲಿ ಟರ್ಕಿ ಮತ್ತು ಹಿಂದಿನ ಸೋವಿಯತ್ ಒಕ್ಕೂಟಕ್ಕೆ ಸೇರಿದವರೇ ಹೆಚ್ಚಾಗಿದ್ದಾರೆ.
ಇರಾಕ್‍ನಲ್ಲಿ ಜನವರಿಯಿಂದ 97 ವಿದೇಶಿಯರಿಗೆ ಮರಣದಂಡನೆ ಹಾಗೂ 185 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.