ಬೆಂಗಳೂರು,ಏ.19- ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ ಮತ್ತು ಅಲ್ಪಸಂಖ್ಯಾತ ಆಯೋಗಗಳ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ನೇಮಕ ಸರದಿಯಂತೆ ನೇಮಕವಾಗಬೇಕೆಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ಅಧ್ಯಕ್ಷ ಹ್ಯಾರಿ ಡಿಸೋಜ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ರ ಬಜೆಟ್ ಸುಮಾರು 2850 ಕೋಟಿಗೂ ಹೆಚ್ಚು ಅನುದಾನ ಮೀಸಲಾಗಿಟ್ಟಿದ್ದಾರೆ. ಈ ಹಣದಲ್ಲಿ ಸಮುದಾಯದ ಅಭಿವೃದ್ಧಿಗೆ ಸುಮಾರು 850 ಕೋಟಿ ರೂ. ಮೀಸಲಿಡಬೇಕು ಹಾಗೂ ಕ್ರೈಸ್ತ ಸಮುದಾಯವನ್ನು ಮೇಲ್ವರ್ಗದ ಸಮುದಾಯದ 3ಬಿ ವರ್ಗಕ್ಕೆ ಸೇರಿಸಿರುವುದರಿಂದ ಸಮುದಾಯಕ್ಕೆ ಸಿಗಬೇಕಾದ ಯಾವುದೇ ಸವಲತ್ತು ಮತ್ತು ಇತರ ಸೌಲಭ್ಯಗಳು ಸಿಗುತ್ತಿಲ್ಲ ಹಾಗೂ ಕ್ರೈಸ್ತರ ಕೊಡುಗೆ ಮತ್ತು ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿ ಪ್ರತ್ಯೇಕ ಮೀಸಲಾತಿಯನ್ನು ನೀಡುವ ಬಗ್ಗೆ ಪರಿಶೀಲಿಸಲು ಮೂರು ಸದಸ್ಯರ ಆಯೋಗವನ್ನು ನೇಮ ಮಾಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ನಮ್ಮ ಸರಳ ಬೇಡಿಕೆಗಳನ್ನು ಅಳವಡಿಸಿ, ಅನುಷ್ಠಾನಗೊಳಿಸುವ ಬಗ್ಗೆ ಘೋಷಣೆ ಮಾಡುವ ರಾಜಕೀಯ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯವು ಬೆಂಬಲ ಸೂಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಲಿ ಇರುವ ಎರಡು ಶಾಸಕರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಿದ್ದು , ಕಡೇ ಪಕ್ಷ ಬೀದರ್ ಹಾಗೂ ಮೂಡಬಿದರೆಯಲ್ಲಿ ಸಮುದಾಯದ ಆಕಾಂಕ್ಷಿಗಳ ಅವಕಾಶ ನೀಡಬೇಕಾಗಿತ್ತು. ಬಿಜೆಪಿ ವತಿಯಿಂದ ಯಾರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇದುವರೆಗೆ ನೀಡಿರುವುದಿಲ್ಲ. ಜೆಡಿಎಸ್‍ನಿಂದ ಕನಿಷ್ಠ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಹಹುದು ಎಂಬ ಆಶಾ ಭಾವನೆ ನಮ್ಮದು ಎಂದು ತಿಳಿಸಿದರು.