ಬೆಂಗಳೂರು, ಏ.18-ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮೇಲ್ಮನೆ ಬಿಜೆಪಿ ಸದಸ್ಯ ಸೋಮಣ್ಣ ಬೇವಿನ ಮರದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರು. ಆದರೆ ಇತ್ತೀಚೆಗೆ ಪ್ರಕಟಗೊಂಡ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಬಸವರಾಜು ಬೊಮ್ಮಾಯಿಗೆ ಟಿಕೆಟ್ ನೀಡಲಾಗಿತ್ತು.
ಇದರಿಂದ ಬೇಸರಗೊಂಡಿರುವ ಸೋಮಣ್ಣ ಬೇವಿನ ಮರದ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಕಳುಹಿಸಿಕೊಡಲಾಗಿದ್ದು,ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಸೋಮಣ್ಣ ಬೇವಿನ ಮರದ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಭವವಿದೆ. ಈ ಮೊದಲು ರಾಯಣ್ಣ ಬ್ರಿಗೇಡ್ನಲ್ಲಿ ಗುರುತಿಸಿಕೊಂಡಿದ್ದ ಅವರಿಗೆ ಈಶ್ವರಪ್ಪ ಟಿಕೆಟ್ ಕೊಡಿಸುವ ಭರವಸೆ ಕೊಟ್ಟಿದ್ದರು.
ಆದರೆ ಶಿವಮೊಗ್ಗದಿಂದ ಈಶ್ವರಪ್ಪ ಅವರು ತಮಗೆ ಟಿಕೆಟ್ ಪಡೆಯಲು ಹರಸಾಹಸ ಪಡೆಯಬೇಕಾಗಿತ್ತು. ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾದರು.
ಪಕ್ಷದ ಪ್ರಮುಖರು ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರಾದರೂ ಸೋಮಣ್ಣ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇದೀಗ ಬೆಂಬಲಿಗರ ಒತ್ತಡಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಒಂದು ವೇಳೆ ಬೇವಿನ ಮರದ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬೊಮ್ಮಾಯಿಗೆ ಭಾರೀ ಹೊಡೆತ ಬೀಳಲಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.