ಬೆಂಗಳೂರು, ಏ.18-ಯುವ ಜನರಲ್ಲಿ ಬಸವಣ್ಣನವರ ವಚನಗಳನ್ನು ಬಿತ್ತುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಬೇಲಿಮಠ ಮಹಾಸಂಸ್ಥಾನದ ಶಿವಾನುಭವ ಚರಮೂರ್ತಿ ಶ್ರೀ ಶಿವರುದ್ರ ಮಹಾಸ್ವಾಮೀಜಿಗಳು ತಿಳಿಸಿದರು.
ನಗರದ ಅನುಭವ ಮಂಟಪದಲ್ಲಿ ಬಸವ ಜಯಸಂತಿ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳ ಮೂಲಕ ವ್ಯಕ್ತಿ ವಿಕಾಸನ ಮಾಡಬೇಕಿದೆ. ವಿದ್ಯಾರ್ಥಿಗಳು ಬಸವಣ್ಣನವರ ವಚನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಕರೆ ನೀಡಿದರು.
ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ವಚನಗಳನ್ನು ತಿಳಿಸುವುದಕ್ಕಾಗಿ ಗ್ಲೋಬಲ್ ಬಸವ ಫೌಂಡೇಷನ್ ವತಿಯಿಂದ 44 ದೇಶದ ಪ್ರಮುಖರು ಜಾಗತಿಕ ಸಮಾವೇಶ ಮಾಡುತ್ತಿದ್ದಾರೆ. ಅಲ್ಲದೆ ಕಳೆದ ವರ್ಷ ಬಸವಣ್ಣನವರ 23 ಭಾಷೆಗಳಲ್ಲಿ 1500 ವಚನಗಳನ್ನು ಭಾಷಾಂತರಗೊಳಿಸಿದ್ದು, ಇದನ್ನು ದೆಹಲಿಯಲ್ಲಿ ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಬಸವಣ್ಣನವರ ತತ್ವಗಳನ್ನು ಸಮಾಜದ ನಾಗರಿಕರಿಗೆ ತಿಳಿಸುವ ಉದ್ದೇಶದಿಂದಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎನ್ನಲ್ಲಿ ಏನುಂಟು ಎಂಬುವುದು ಮನಸಿನಲ್ಲಿ ಯಾವಾಗಲೂ ಇರಬೇಕು. ಆಗ ಮಾತ್ರ ಸಾಧನೆಯತ್ತ ಮುಖ ಮಾಡಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ವಿಶ್ರಾಂತ ನ್ಯಾಯಾಧೀಶರಾದ ಸಿ.ಆರ್.ಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರು ಅಸಮಾನತೆಯ ವಿರುದ್ದ ಹೋರಾಡಿದವರು. ಆಧುನಿಕ ಯುಗಕ್ಕೆ ಹೊಂದುವಂತಹ ಅನುಭವ ಮಂಟಪವನ್ನು 12ನೇ ಶತಮಾನದಲ್ಲಿ ಪ್ರಾರಂಭಿಸುವ ಮೂಲಕ ಸಮಾನತೆಗಾಗಿ ಶ್ರಮಿಸಿದವರು. ಸಂಸತ್‍ನ ಪ್ರತಿರೂಪವೇ ಅನುಭವ ಮಂಟಪವಾಗಿದೆ ಎಂದರು.
ಇವರು ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ವ್ಯಕ್ತಿ ವಿಕಸನಕ್ಕೆ ಕಾರಣರಾದರು. ಶಾಂತಿ, ಸಮಾನತೆ ಆಧಾರದ ಮೇಲೆ ಬಸವ ಶಾಸನವನ್ನು ರಚಿಸಿದ್ದಾರೆ. ಬಸವಣ್ಣನವರ ವಚನಗಳು ಜನಸಾಮಾನ್ಯರಲ್ಲಿ ಅರ್ಥವಾಗುವ ಆಡುಭಾಷೆಯಲ್ಲಿ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಬಸವಣ್ಣನವರು ಕೆಳಜಾತಿ ಪರವಾಗಿ ತಮ್ಮ ಬದುಕನ್ನು ಮೀಸಲಿಟ್ಟವರು. ಬಸವಣ್ಣನವರು ಹಾಗೂ ಅಂಬೇಡ್ಕರ್ ಅವರು ಒಂದೇ ಮಾರ್ಗದಲ್ಲಿ ಬಂದವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜೆತ್ತಿ, ದೂರದರ್ಶನ ಉಪನಿರ್ದೇಶಕಿ ನಿರ್ಮಲ ಎಲಿಗಾರ, ಹಿರಿಯ ಸಾಹಿತಿ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.