ಬೆಂಗಳೂರು, ಏ.18- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಅನುಮಾನವೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟಪಡಿಸಿದೆ.
ರಾಜ್ಯ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು 2017ರ ಜುಲೈ 1ರಿಂದಲೇ ಪರಿಷ್ಕರಿಸಲಾಗಿದೆ. ಆದರೆ ಪ್ರಸ್ತುತ ಏ.1ರಿಂದ ಅನ್ವಯವಾಗುವಂತೆ ಪರಿಷ್ಕರಣೆಯ ಆರ್ಥಿಕ ಸೌಲಭ್ಯಗಳನ್ನು ಸರ್ಕಾರಿ ನೌಕರರಿಗೆ ನೀಡಲು ಕಳೆದ ಮಾ.1ರಂದೇ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ.
ಸರ್ಕಾರ ಹೊರಡಿಸಿದ ಆದೇಶಕ್ಕೆ ಮಾ.2ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಘಟನೋತ್ತರ ಅನುಮೋದನೆ ದೊರೆತಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ವೇತನ ಪರಿಷ್ಕರಣೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವರವಾದ ನಿಯಮಗಳು ಫಿಟ್‍ಮೆಂಟ್ ಕೋಸ್ಟಕ ಮತ್ತು ಆದೇಶಗಳನ್ನು ಹೊರಡಿಸುವ ಮುನ್ನ ಭಾರತೀಯ ಚುನಾವಣಾ ಆಯೋಗದಿಂದ ನಿರೀಕ್ಷಣಾ ಪತ್ರವನ್ನು ಪಡೆಯಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಏ.3ರಂದು ಪತ್ರ ಬರೆಯಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಅನುಮತಿ ದೊರೆತ ಕೂಡಲೇ ಸಂಬಂಧಿತ ನಿಯಮಗಳು ಹಾಗೂ ಆದೇಶಗಳನ್ನು ಹೊರಡಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.