ಚೆನ್ನೈ, ಏ.18-ಸುದ್ದಿಗೋಷ್ಠಿಯಲ್ಲಿ ಪತ್ರಕರ್ತೆಯ ಕೆನ್ನೆ ಸವರಿದ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದು, ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀ ಸುಬ್ರಹ್ಮಣ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವ ಬದಲು ಆಕೆಯ ಕೆನ್ನೆ ಸವರಿದ ಗೌರ್ನರ್ ವರ್ತನೆ ಈಗ ಚರ್ಚೆಗೆ ಗ್ರಾಸವಾಗಿದೆ.
ಮಧುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಉನ್ನತಾಧಿಕಾರಿಗಳಿಂದ ನಡೆಯುತ್ತಿದೆ ಎನ್ನಲಾದ ಲೈಂಗಿಕ ಕಿರುಕುಳದ ಬಗ್ಗೆ ಪ್ರಾಧ್ಯಾಪಕಿಯೊಬ್ಬರು ಮಾಡಿರುವ ಗಂಭೀರ ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡಲು ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಸುದ್ದಿಗೋಷ್ಠಿ ಕರೆದು ಸ್ಪಷ್ಟೀಕರಣ ನೀಡುತ್ತಿದ್ದರು.
ರಾಜ್ಯಪಾಲರ ವಿರುದ್ಧವೇ ಲೈಂಗಿಕ ದುರ್ನಡತೆ ಆರೋಪಗಳೂ ಇರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳ ಸುರಿಮಳೆಯಾಯಿತು. ನಿಮ್ಮ ವಿರುದ್ಧವೇ ಸಿಪಿಎಂ ನಾಯಕರೊಬ್ಬರು ಈ ಕುರಿತು ಗಂಭೀರ ಆರೋಪ ಮಾಡಿದ್ದಾರಲ್ಲ ಎಂದು ಪತ್ರಕರ್ತೆ ಲಕ್ಷ್ಮೀ ಕೇಳಿದಾಗ ಇದೊಂದು ವಿವೇಚನಾರಹಿತ ಆರೋಪ ಎಂದು ಹಾರಿಕೆ ಉತ್ತರ ನೀಡಿದ್ದೇ ಅಲ್ಲದೇ ಆಕೆಯ ಕೆನ್ನೆಯನ್ನು ಸವರಿದರು.
ಈ ಘಟನೆ ನಂತರ ಟ್ವೀಟ್ ಮಾಡಿರುವ ಪತ್ರಕರ್ತೆ, ರಾಜ್ಯಪಾಲರ ವರ್ತನೆ ನನಗೆ ಬೇಸರ ಮೂಡಿಸಿದೆ. ಈ ಘಟನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ನಾನು ಅವರಿಂದ ಉತ್ತರ ಬಯಸಿದೆ. ಆದರೆ ಗೌರ್ನರ್ ನನ್ನ ಕೆನ್ನೆ ಮೇಲೆ ಕೈಯಾಡಿಸಿದರು. ಅಪರಿಚಿತರೊಬ್ಬರು ಸಮ್ಮತಿ ಇಲ್ಲದೇ ಅದರಲ್ಲೂ ಓರ್ವ ಮಹಿಳೆಯನ್ನು ಸ್ಪರ್ಶಿಸುವುದು ಅನುಚಿತ ನಡವಳಿಕೆ ಎಂದಿದ್ದಾರೆ.
ಡಿಎಂಕೆ ಸಂಸದೆ ಕನಿಮೋಳಿ ಸಹ ರಾಜ್ಯಪಾಲರ ನಡತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ರಾಜ್ಯಪಾಲ ಈ ಕೆಟ್ಟ ಉದ್ದೇಶದಿಂದ ಈ ರೀತಿ ಮಾಡಿಲ್ಲದಿದ್ದರೂ, ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಗೌರ್ನರ್ ಈ ರೀತಿ ನಡೆದುಕೊಂಡಿರುವುದು ಅವರ ಹುದ್ದೆಗೆ ಶೋಭೆ ತರುವಂಥದ್ದಲ್ಲ ಎಂದು ಹೇಳಿದ್ದಾರೆ.
ಲೈಂಗಿಕ ಸುಖ ನೀಡಿದರೆ ಶೈಕ್ಷಣಿಕ ಮತ್ತು ಹಣಕಾಸು ನೆರವು ನೀಡುವುದಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳುತ್ತಿರುವ ಬಗ್ಗೆ ವಿವಿ ಪ್ರಾಧ್ಯಾಪಕಿಯೊಬ್ಬರು ಮಾಡಿರುವ ಆರೋಪ ವಿವಾದ ಸೃಷ್ಟಿಸಿರುವಾಗಲೇ ರಾಜ್ಯಪಾಲರ ಈ ಅನಪೇಕ್ಷಿತ ವರ್ತನೆಯೂ ಚರ್ಚೆಗೆ ಗ್ರಾಸವಾಗಿದೆ.