ಮೈಸೂರು, ಏ.18- ಬಿಜೆಪಿಯವರ ಸಣ್ಣತನದ ವರ್ತನೆಯನ್ನು ಇದು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅರಮನೆ ಸಮೀಪದ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅನಂತಕುಮಾರ್ ಹೆಗಡೆ ಅವರ ಬೆಂಗಾವಲು ಕಾರಿನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರತಾಪ ಸಿಂಹ ಮಾಡಿರುವ ಟ್ವಿಟ್ನಲ್ಲಿನ ವಿಚಾರ ಕುರಿತು ಪ್ರಶ್ನಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂತಹವರ ಬಗ್ಗೆ ನೀವೇಕೆ ಪ್ರಶ್ನಿಸುತ್ತೀರಿ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರಲ್ಲದೆ ಅವರ ಬಗ್ಗೆ ಮಾತನಾಡಲು ಅಸಹ್ಯವಾಗುತ್ತದೆ. ಇಷ್ಟೊಂದು ಸಣ್ಣತನದ ವರ್ತನೆಯಿಂದಲೇ ಬಿಜೆಪಿಯವರ ಬಗ್ಗೆ ತಿಳಿಯಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಣ್ಣ , ಅಂಬೇಡ್ಕರ್, ಗಾಂಧಿಯಂತಹ ಮಹನೀಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ನಾನು ಕಳೆದ 5 ವರ್ಷಗಳ ಹಿಂದೆ ಇದೇ ಬಸವ ಜಯಂತಿಯಂದು ಅಧಿಕಾರ ವಹಿಸಿಕೊಂಡೆ. ಅಂದಿನಿಂದ ಅವರ ತತ್ವಾದರ್ಶಗಳನ್ನು ಪಾಲಿಸುತ್ತಾ ಸಮ ಸಮಾಜ ನಿರ್ಮಾಣಕ್ಕೆ ಹೋರಾಟ ನಡೆಸುತ್ತಿದ್ದೇನೆ. ಅದೇ ರೀತಿಯಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದ್ದೇನೆ ಎಂದರು.
ಗುಟ್ಟು ಬಿಟ್ಟು ಕೊಡದ ಸಿಎಂ: ಬಾದಾಮಿಯಲ್ಲಿ ಸ್ಪರ್ಧಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಾದಾಮಿಯಲ್ಲಿ ತಾವು ಸ್ಪರ್ಧಿಸುವಂತೆ ಅಲ್ಲಿನ ಕಾಂಗ್ರೆಸ್ ಮುಖಂಡರು ತಮ್ಮನ್ನು ಭೇಟಿ ಮಾಡಿ ಒತ್ತಡ ಹೇರುತ್ತಿದ್ದಾರೆ.
ನಾನೀಗಾಗಲೇ ಹೈಕಮಾಂಡ್ಗೆ ಚಾಮುಂಡೇಶ್ವರಿ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಆದರೂ ಬಾದಾಮಿಯ ಕೆಲ ಮುಖಂಡರು ತೀವ್ರ ಒತ್ತಡ ತರುತ್ತಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಏನೂ ಹೇಳಲಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.