ವಿನಾಶಕಾರಿ ಚಂಡಮಾರುತಕ್ಕೆ 16 ಮಂದಿ ಬಲಿಯಾಗಿ, 50ಕ್ಕೂ ಹೆಚ್ಚು ಮಂದಿ ಗಾಯ:

ಕೋಲ್ಕತಾ, ಏ.18-ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಬಂದೆರಗಿದ ವಿನಾಶಕಾರಿ ಚಂಡಮಾರುತಕ್ಕೆ 16 ಮಂದಿ ಬಲಿಯಾಗಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ 7.42ರಲ್ಲಿ ಕೊಲ್ಕತಾದ 26 ಸ್ಥಳಗಳ ಮೇಲೆ ಗಂಟೆಗೆ 98 ಕಿ.ಮೀ.ವೇಗದಲ್ಲಿ ಚಂಡಮಾರುತ ಅಪ್ಪಳಿಸಿ ಈವರೆಗೆ 16 ಮಂದಿ ಮೃತಪಟ್ಟಿದ್ದಾರೆ. ಹೌರಾ, ಹೂಗ್ಲಿ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿದೆ.
ಬಿರುಗಾಳಿಯ ತೀವ್ರತೆಗೆ ಅನೇಕ ಮರಗಳು ಬುಡಮೇಲಾಗಿವೆ. ವಿದ್ಯುತ್ ಕಂಬಗಳು ಬೆಂಕಿ ಕಿಡಿ ಕಾರುತ್ತಾ ಧರೆಗುರುಳಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೋಲ್ಕತಾ ಮೆಟ್ರೋ ರೈಲು ಸಂಚಾರವನ್ನು ರಾತ್ರಿ 7.50ರಿಂದ ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
ಮಹಾನಗರದ ಅನೇಕ ಕಡೆಗಳಲ್ಲಿ ವಾಹನ ದಟ್ಟಣೆಗೆ ಕಾರಣವಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
ನಿನ್ನೆ ರಾತ್ರಿ 7.42ರಲ್ಲಿ ಗಂಟೆಗೆ 98 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಜಿ.ಕೆ.ದಾಸ್ ತಿಳಿಸಿದ್ದಾರೆ.
ಬಿರುಗಾಳಿಯ ಹೊಡೆತಕ್ಕೆ ರಸ್ತೆಗಳಲ್ಲಿ ಉರುಳಿ ಬಿದ್ದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಕೋಲ್ಕತಾ ಮುನ್ಸಿಪಲ್ ಕಾಪೆರ್Çರೇಷನ್‍ನ ವಿಪತ್ತು ನಿರ್ವಹಣಾ ತಂಡವು ರಾತ್ರಿ ಇಡೀ ಶ್ರಮಿಸಿದೆ.
ಪ್ರತಿಕೂಲ ಹವಾಮಾನದಿಂದ ರೈಲು ಮತ್ತು ವಿಮಾನಗಳ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.  ಅಗತ್ಯವಾದ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ