ಎಟಿಎಂಗಳಲ್ಲಿ ಹಣವಿಲ್ಲದೇ ಸಾರ್ವಜನಿಕರ ಪರದಾಟ:

ನವದೆಹಲಿ, ಏ.17-ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಗೊಳಿಸಿದ ನಂತರ ಉದ್ಭವಿಸಿದ್ದ ಎಟಿಎಂಗಳಲ್ಲಿ ನೋಟು ಅಭಾವದಂಥ ಪರಿಸ್ಥಿತಿ ಹೋಲುವಂಥ ಸನ್ನಿವೇಶವೇಶ ದೇಶದ ಹಲವೆಡೆ ಕಂಡುಬಂದಿವೆ. ಎಟಿಎಂಗಳಲ್ಲಿ ಹಣವಿಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ.
ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ನಗದು ಕೊರತೆ ಗೋಚರಿಸಿದ್ದು, ಎಟಿಎಂಗಳಲ್ಲಿ ಹಣ ದೊರಕುತ್ತಿಲ್ಲ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಎಟಿಎಂಗಳ ಮುಂದೆ ಔಟ್ ಆಫ್ ಸರ್ವಿಸ್ ಅಥವಾ ತಾತ್ಕಾಲಿಕವಾಗಿ ಹಣ ಲಭಿಸುತ್ತಿಲ್ಲ ಎಂಬ ಫಲಕಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ. ಎಟಿಎಂಗಳಿಗೆ ಹೋಗಿ ಜನರು ಈ ಬೋರ್ಡ್‍ಗಳನ್ನು ನೋಡಿಕೊಂಡು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.
ನೋಟ್ ಬ್ಯಾನ್ ನಂತರ ಉದ್ಭವಿಸಿರುವ ಈ ಹೊಸ ಸಮಸ್ಯೆ ಬಗ್ಗೆ ಆತಂಕಗೊಂಡಿರುವ ಕೇಂದ್ರ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಇದೇ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನೀಡಿರುವ ಹೇಳಿಕೆಯೊಂದು ಅಚ್ಚರಿ ಮೂಡಿಸಿದೆ. ಇತ್ತೀಚೆಗೆ 2,000 ರೂ. ಮುಖಬೆಲೆಯ ನೋಟುಗಳು ಕಾಣಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಚಲಾವಣೆಯಿಂದ ಅವರು ಕಣ್ಮರೆಯಾಗಿವೆ. ಇದರ ಹಿಂದೆ ಯಾವುದೇ ಕುತಂತ್ರ ಇರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ಧಾರೆ.
ನಗದು ಅಭಾವ ಸೃಷ್ಟಿಯಾಗಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ? ಈ ನೋಟುಗಳು ಎಲ್ಲಿ ಹೋಗುತ್ತಿವೆ? ಕೃತಕ ಕರೆನ್ಸಿ ಕೊರತೆಯನ್ನು ಯಾರು ಸೃಷ್ಟಿಸುತ್ತಿದ್ದಾರೆ ? ಚಲಾವಣೆಯಿಂದ ನೋಟುಗಳನ್ನು ದೂರವಿಡಲು ಏನು ಕಾರಣ? ಎಂಬಿತ್ಯಾದಿ ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.
ರೈತರ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು ಹಳೆ ನೋಟು ರದ್ದತಿಗೆ ಮುನ್ನ 15,00,000 ಕೋಟಿ ರೂ.ಗಳು ಚಲಾವಣೆಯಲ್ಲಿತ್ತು. ನೋಟು ಅಮಾನ್ಯೀಕರಣದ ಬಳಿಕ 16,50,000 ಕೋಟಿ ರೂ.ಗಳಿಗೆ ಚಲಾವಣೆ ವೃದ್ದಿಯಾಗಿತ್ತು. ಈಗ ನೋಡಿದರೆ 2,000 ನೋಟುಗಳು ನಾಪತ್ತೆಯಾಗಿವೆ ಎಂದು ಚೌಹಾಣ್ ಮಾರ್ಮಿಕವಾಗಿ ನುಡಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ