ನವದೆಹಲಿ, ಏ.17-ಭ್ರಷ್ಟಾಚಾರ ನಿಗ್ರಹಿಸಲು ಲೋಕಪಾಲರ ನೇಮಕಾತಿಗಾಗಿ ಆಯ್ಕೆ ಸಮಿತಿಯಲ್ಲಿ ಸೂಕ್ತ ತೀರ್ಪಗಾರರ ಹುದ್ದೆ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಇಂದು ತಿಳಿಸಿದೆ.
ನ್ಯಾಯಮೂರ್ತಿ ರಂಜನ್ ಗೊಗೈ ನೇತೃತ್ವದ ಪೀಠಕ್ಕೆ ಇಂದು ಈ ವಿಷಯ ಮನವರಿಕೆ ಮಾಡಿಕೊಟ್ಟ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಸಮಿತಿಗೆ ಖ್ಯಾತ ತೀರ್ಪುಗಾರರೊಬ್ಬರ ಸೇರ್ಪಡೆಗೆ ಶಿಫಾರಸು ಮಾಡಲಾಗಿದೆ ಹಾಗೂ ಅದು ಪ್ರಗತಿಯಲ್ಲಿದೆ ಎಂದರು. ಈ ಹಂತದಲ್ಲಿ ಯಾವುದೇ ಆದೇಶ ಹೊರಡಿಸುವ ಅಗತ್ಯವನ್ನು ತಾನು ಪರಿಗಣಿಸುವುದಿಲ್ಲ ಎಂದು ತಿಳಿಸಿದ ಸುಪ್ರೀಂಕೋರ್ಟ್ ಪೀಠವು ಸಾಧ್ಯವಾದಷ್ಟೂ ಶೀಘ್ರವೇ ಲೋಕಪಾಲರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸುವುದಾಗಿ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಮೇ 15ಕ್ಕೆ ನಿಗದಿಗೊಳಿಸಲಾಗಿದೆ.
ಕಳೆದ ವರ್ಷ ಏ.27ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಲೋಕಪಾಲರನ್ನು ನೇಮಿಸದ ಸಂಗತಿಯನ್ನು ಪ್ರಸ್ತಾಪಿಸಿ ಕಾಮನ್ ಕಾಸ್ ಎಂಬ ಎನ್ಜಿಒ ಸಂಸ್ಥೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಶೀಘ್ರ ನೇಮಕದ ಭರವಸೆ ವ್ಯಕ್ತಪಡಿಸಿತು.