ಬೆಂಗಳೂರು, ಏ.17- ವಿಧಾನಸಭೆಯಲ್ಲಿ ಪ್ರಜ್ಞಾವಂತ ಶಾಸಕರ ಕೊರತೆ ಎದ್ದು ಕಾಣುತ್ತಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಇಂದಿಲ್ಲಿ ಹೇಳಿದರು.
ಅರಮನೆ ಮೈದಾನದಲ್ಲಿಂದು ಜೆಡಿಎಸ್ ಕಾನೂನು ಘಟಕದ ವತಿಯಿಂದ ನಡೆದ ವಕೀಲರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭೆಗೆ ಆಯ್ಕೆಯಾಗುವ ಶಾಸಕರಲ್ಲಿ ಪ್ರಜ್ಞಾವಂತಿಕೆಯ ಕೊರತೆ ಇದೆ. ಹಾಗಾಗಿ ವಿಧಾನಸಭೆಯ ಗುಣಮಟ್ಟ ಕುಸಿಯುತ್ತಿದೆ ಎಂದರು.
ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ವಕೀಲರ ಮಾರ್ಗದರ್ಶನದಲ್ಲಿ ಮಾದರಿ ಕಾನೂನು ಸುವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ ಎಂದ ಅವರು, ಈ ಹಿಂದೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಯುವ ವಕೀಲರಿಗಾಗಿ ಸ್ಟೈಫಂಡ್ ಜಾರಿಗೆ ತರಲಾಗಿತ್ತು ಎಂದು ಸ್ಮರಿಸಿದರು.
ಈ ಬಾರಿಯೂ ವಕೀಲರು ಜೆಡಿಎಸ್ಅನ್ನು ಬೆಂಬಲಿಸುವಂತೆ ಹೊರಟ್ಟಿ ಮನವಿ ಮಾಡಿದರು.
ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಚಿವ ವಿಶ್ವನಾಥ್, ಶಾಸಕ ಮಧು ಬಂಗಾರಪ್ಪ, ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯ ಶರವಣ, ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.