ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವುದು ಬಹುತೇಕ ಖಚಿತ

ಬೆಂಗಳೂರು, ಏ.17-ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್ ಪಕ್ಷದ ಇತ್ತೀಚಿನ ವಿದ್ಯಮಾನಗಳಿಂದ ಬೇಸತ್ತಿರುವ ಅವರು ಆ ಪಕ್ಷಕ್ಕೆ ಗುಡ್‍ಬೈ ಹೇಳಲು ನಿರ್ಧರಿಸಿದ್ದು, ಬೇಷರತ್ತಾಗಿ ಜೆಡಿಎಸ್ ಪಕ್ಷ ಸೇರಲು ಮುಂದಾಗಿದ್ದಾರೆ.

ಲಿಂಗಾಯತ ಸಮುದಾಯದ ಮುಖಂಡರಾಗಿರುವ ಪುಟ್ಟರಾಜು ಅವರು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬೆಂಗಳೂರು ಮಹಾನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಲಿಂಗಾಯತ ಸಮುದಾಯದ ಯಾವುದೇ ಮುಖಂಡರಿಗೆ ಟಿಕೆಟ್‍ನ್ನು ಕಾಂಗ್ರೆಸ್ ಪಕ್ಷ ನೀಡಿರಲಿಲ್ಲ. ಅಲ್ಲದೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಇಬ್ಬರಿಗೆ ಮಾತ್ರ ತಿಪಟೂರು ಮತ್ತು ಗುಂಡ್ಲುಪೇಟೆಯಲ್ಲಿ ಸಮುದಾಯದವರಿಗೆ ಟಿಕೆಟ್ ನೀಡಿದೆ.

ಸುಮಾರು 19 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರು ಪ್ರಬಲವಾಗಿದ್ದರು. ಕಾಂಗ್ರೆಸ್ ಪಕ್ಷ ಕಡೆಗಣಿಸಿ ಬೇರೆ ಸಮುದಾಯದವರಿಗೆ ಮಣೆ ಹಾಕಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಕಡೂರು ಸೇರಿದಂತೆ ಬಹುತೇಕ ಕಡೆ ಕಾಂಗ್ರೆಸ್ ಸಮುದಾಯದವರನ್ನು ಕಡೆಗಣಿಸಿದೆ ಎಂದು ಪುಟ್ಟರಾಜು ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಬಹುತೇಕ ಕಡೆ ಲಿಂಗಾಯತ ಸಮುದಾಯದವರಿಗೆ ಜೆಡಿಎಸ್ ಪಕ್ಷದಲ್ಲಿ ಆದ್ಯತೆ ನೀಡಿದ್ದಾರೆ. ಅಲ್ಲದೆ, ಹಳೇ ಮೈಸೂರು ಭಾಗದಲ್ಲೂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ನೈಜ ಜಾತ್ಯತೀತ ನೆಲೆಗಟ್ಟಿನಲ್ಲಿ ಜೆಡಿಎಸ್ ಪಕ್ಷ ಕಾರ್ಯನಿರ್ವಹಿಸುತ್ತಿದೆ. ನಾವು ಮೂಲ ಜೆಡಿಎಸ್ ಪಕ್ಷದವರೇ ಆಗಿದ್ದು, ಮತ್ತೆ ಆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‍ನ ಇತ್ತೀಚಿನ ಬೆಳವಣಿಗೆಗಳಿಂದ ಭಾರೀ ಬೇಸರ ಉಂಟಾಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಾಯಕತ್ವ ಮೆಚ್ಚಿ ಆ ಪಕ್ಷ ಸೇರಲು ಮುಂದಾಗಿದ್ದೇವೆ ಎಂಬುದು ಪುಟ್ಟರಾಜು ಅವರು ಅಭಿಪ್ರಾಯವಾಗಿದೆ.

ವಿ.ಸೋಮಣ್ಣ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಪುಟ್ಟರಾಜು ಅವರು ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಇಂದು ಅಥವಾ ನಾಳೆ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಾವುದೇ ಅಧಿಕಾರದ ಆಸೆಯಿಂದ ಜೆಡಿಎಸ್ ಪಕ್ಷ ಸೇರುತ್ತಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ರಾಜಾಜಿನಗರ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಆ ಪಕ್ಷದವರು ನಮಗೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ. ಆದರೆ ಟಿಕೆಟ್ ಕೊಡಲಿ, ಬಿಡಲಿ ಬೇಷರತ್ತಾಗಿ ಪಕ್ಷ ಸೇರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ