ಬೆಂಗಳೂರು, ಏ.17-ಕಲ್ಲಪ್ಪ ಹಂಡಿಭಾಗ್ ಪತ್ನಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಕುರುಬ ಸಮಾಜದವರು ಆನಂದ್ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಸಂಘದ ಕಾರ್ಯಾಧ್ಯಕ್ಷ ಎಂ.ವಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ, ಖಜಾಂಚಿ ಕೆ.ಟಿ.ನಾಗರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಚುನಾವಣೆ ಕಾರಣಕ್ಕೆ ಮಹಿಳೆ ಎಂಬುದನ್ನು ನೋಡದೆ ಕೆಟ್ಟದ್ದಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲಪ್ಪ ಹಂಡಿಭಾಗ್ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಕುರುಬ ಜನಾಂಗದವರೆಂಬ ಒಂದೇ ಕಾರಣಕ್ಕೆ ಆತನ ಪತ್ನಿ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಇದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಸಮಾನತೆ ಎಂಬುದನ್ನು ಮಹಿಳೆಯರಿಗೆ ಬರೀ ಮಾತಿನಲ್ಲಿ ನೀಡುವುದರಲ್ಲಿ ಅರ್ಥವಿಲ್ಲ. ಮಹಿಳೆಯ ಬಗೆಗೆ ಹಿಯ್ಯಾಳಿಕೆ, ಮೂದಲಿಕೆ ಮಾತುಗಳನ್ನಾಡಿದರೆ ಆಖೆ ನರಕಯಾತನೆ ಅನುಭವಿಸಬೇಕಾಗುತ್ತದೆ. ಮಹಿಳಾ ವಿರೋಧಿಭಾವನೆ ಮೊದಲು ಹೋಗಬೇಕು ಎಂದು ಈ ವೇಳೆ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.