ಬೀಜಿಂಗ್, ಏ.17-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಾರಾಂತ್ಯದಲ್ಲಿ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಶಾಂಘೈ ಸಹಕಾರ ಸಂಘಟನೆಯ(ಎಸ್ಸಿಒ) ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರ ಸಭೆಗಳಲ್ಲಿ ಪಾಲ್ಗೊಳ್ಳುವರು.
ಏ.21ರಂದು ಚೀನಾ ರಾಜಧಾನಿ ಬೀಜಿಂಗ್ಗೆ ಆಗಮಿಸುವ ಅವರು ಏ.22ರಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಚರ್ಚೆ ನಡೆಸುವರು. ಏ.24ರಂದು ಎಸ್ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಅವರು ಪಾಲ್ಗೊಳ್ಳುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಚೀನಾ ಭೇಟಿ ನಂತರ ಸುಷ್ಮಾ ಮಂಗೋಲಿಯಾಗೆ ತೆರಳುವರು.
ಇದೇ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸಹ ಚೀನಾಗೆ ಆಗಮಿಸಲಿದ್ದು, ಏ.24ರಂದು ಎಸ್ಸಿಒ ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸುವರು.
ಪಾಕಿಸ್ತಾನದ ವಿದೇಶಾಂಗ ಮತ್ತು ರಕ್ಷಣಾ ಸಚಿವರೂ ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ-ಪಾಕಿಸ್ತಾನದ ನಡುವೆ ಸಂಬಂಧ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.