ಕುಣಿಗಲ್, ಏ.17- ವಿಧಾನಸಭಾ ಚುನಾವಣೆ ಧರ್ಮ-ಅಧರ್ಮದ ಯುದ್ಧವಾಗಿದ್ದು, ಬಹಳ ಎಚ್ಚರಿಕೆಯಿಂದ ಮತದಾರರು ಮತ ಚಲಾಯಿಸಬೇಕೆಂದು ಶಾಸಕ ಡಿ.ನಾಗರಾಜಯ್ಯ ಕರೆ ನೀಡಿದರು.
ಇಂದು ತಾಲೂಕಿನ ಗುನ್ನಾಗೆರೆ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಕ್ರಮ ಹಣದ ವಹಿವಾಟು ಚುನಾವಣೆಯಲ್ಲಿ ಕಾಂಗ್ರೆಸ್ ವತಿಯಿಂದ ಚಲಾವಣೆಯಾಗಲಿದೆ. ಮತದಾರರು ಆಮಿಷಕ್ಕೆ ಒಳಗಾಗದೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಕೇವಲ ಜೆಡಿಎಸ್ ಮತ ವಿಭಜನೆಯಾಗಲೂ ಆ ಪಕ್ಷ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬೇಡಿ. ಕುಮಾರಸ್ವಾಮಿ ಅವರು ರೈತಪರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರೈತರಿಗೋಸ್ಕರ ಇರುವ ನಾಯಕ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪಣ ತೊಡಬೇಕು ಎಂದರು.
ಕಾಂಗ್ರೆಸ್‍ನ ಆಮಿಷಗಳಿಗೆ ಒಳಗಾಗದೆ, ಬಿಜೆಪಿಯ ಅನುಕಂಪಕ್ಕೆ ಮರುಗದೆ ಜೆಡಿಎಸ್‍ಅನ್ನು ಬೆಂಬಲಿಸಿ ಎಂದರು.
ಕುಣಿಗಲ್ ಕ್ಷೇತ್ರದ ಜನತೆ ಸ್ವಾಭಿಮಾನಿ ಪ್ರಜೆಯಾಗಿದ್ದು, ಇಡೀ ರಾಜ್ಯದಲ್ಲೇ ಕುಣಿಗಲ್ ಕ್ಷೇತ್ರ ರಾಜಕೀಯ ಇತಿಹಾಸ ಹೊಂದಿದ್ದು, ಹಲವು ಮಹಾನಾಯಕರುಗಳನ್ನು ಸೃಷ್ಟಿ ಮಾಡಿದ ಕ್ಷೇತ್ರವಾಗಿದ್ದು, ತಮ್ಮತನವನ್ನು ಈ ಬಾರಿ ಬಿಟ್ಟುಕೊಡಬೇಡಿ ಎಂದು ಮನವಿ ಮಾಡಿದರು.