ಮಾಜಿ ಸಂಸದರಿಗೆ ಪಿಂಚಣಿ, ಪ್ರಯಾಣ ಭತ್ಯೆ : ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸುಪ್ರೀಂಕೋರ್ಟ್‍ನಲ್ಲಿ ವಜಾ

ನವದೆಹಲಿ, ಏ.16-ಮಾಜಿ ಸಂಸದರಿಗೆ ಪಿಂಚಣಿ, ಪ್ರಯಾಣ ಭತ್ಯೆ ಸೇರಿದಂತೆ ನೀಡಲಾಗುತ್ತಿರುವ ವಿವಿಧ ಸೌಲಭ್ಯಗಳನ್ನು ಪ್ರಶ್ನಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸುಪ್ರೀಂಕೋರ್ಟ್‍ನಲ್ಲಿ ಇಂದು ವಜಾಗೊಂಡಿದೆ.
ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠ ಹೇಳಿದೆ.
ಸಂಸದರಾಗಿ ತಮ್ಮ ಅವಧಿಯನ್ನು ಪೂರೈಸಿದ ನಂತರವೂ ಚುನಾಯಿತ ಜನಪ್ರತಿನಿಧಿಗಳಾಗಿದ್ದ ಅವರ ಘನತೆಯನ್ನು ಕಾಪಾಡಬೇಕಾಗುತ್ತದೆ. ಇದಕ್ಕಾಗಿ ಸಂಸತ್ತಿನ ಮಾಜಿ ಸದಸ್ಯರು ಪಿಂಚಣಿ ಮತ್ತಿತರ ಸೌಲಭ್ಯಗಳಿಗೆ ಹಕ್ಕುಳ್ಳವರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಮಾರ್ಚ್ 7ರಂದು ಸುಪ್ರೀಂಕೋರ್ಟ್‍ನಲ್ಲಿ ಸಮರ್ಥಿಸಿಕೊಂಡಿತ್ತು.
ಯಾವುದೇ ಕಾನೂನು ರೂಪಿಸದೇ ಮಾಜಿ ಸಂಸದರಿಗೆ ಪಿಂಚಣಿ, ಪ್ರಯಾಣ ಭತ್ಯೆ ಹಾಗೂ ಮತ್ತಿತರ ಸೌಲಭ್ಯಗಳನ್ನು ನೀಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಸರ್ಕಾರೇತರ ಸಂಸ್ಥೆ(ಎನ್‍ಜಿಒ)ಯಾದ ಲೋಕ್ ಪ್ರಹರಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಪಿಐಎಲ್‍ನಲ್ಲಿ ತಿಳಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ