ಮುಂಬೈ, ಏ.16-ಆಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಧ್ವಂಸಗೊಳಿಸಿದ್ದು ಭಾರತೀಯ ಮುಸ್ಲಮರಲ್ಲ, ದೇಗುಲವನ್ನು ನಾಶ ಮಾಡಿದ್ದು ವಿದೇಶಿ ಶಕ್ತಿಗಳು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಫಲ್ಘರ್ ಜಿಲ್ಲೆಯ ದಹನು ಪ್ರದೇಶದಲ್ಲಿ ನಿನ್ನೆ ವಿರಾಟ್ ಹಿಂದು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತೀಯರನ್ನು ವಿಚಲಿತರನ್ನಾಗಿ ಮಾಡಲು ವಿದೇಶಿ ಶಕ್ತಿಗಳು ರಾಮಮಂದಿರವನ್ನು ಧ್ವಂಸಗೊಳಿಸಿದವು. ಭಾರತೀಯ ಮುಸಲ್ಮಾನರು ಮಂದಿರವನ್ನು ಭಗ್ನಗೊಳಿಸಿಲ್ಲ. ಭಾರತೀಯ ರಾಷ್ಟ್ರೀಯರು ಅಂಥ ಕೆಲಸ ಮಾಡುವುದಿಲ್ಲ ಎಂದು ಭಾಗವತ್ ತಿಳಿಸಿದರು.
ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ದೇಶದ ಮತ್ತು ಭಾರತೀಯ ಕರ್ತವ್ಯ. ಮಂದಿರ ಎಲ್ಲಿತ್ತೋ ಅಲ್ಲಿಯೇ ಅದು ನಿರ್ಮಾಣವಾಗಬೇಕು. ಅದಕ್ಕಾಗಿ ನಾವು ಹೋರಾಟ ಮಾಡಲು ಸಿದ್ಧ ಎಂದು ಅವರು ಪುನರುಚ್ಚರಿಸಿದರು.
ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದಿದ್ದರೆ, ನಮ್ಮ ಸಂಸ್ಕøತಿಯ ಬೇರುಗಳು ಕತ್ತರಿಸಲ್ಪಡುತ್ತವೆ. ಆಯೋಧ್ಯೆಯಲ್ಲಿ ರಾಮಮಂದಿರ ಪುನರ್ಸ್ಥಾಪನೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭಾಗವತ್ ನುಡಿದರು.