ಹಾಲಿ-ಮಾಜಿ ಸಿಎಂಗಳ ಚುನಾವಣಾ ಕಾದಾಟಕ್ಕೆ ವೇದಿಕೆಯಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ :

ಮೈಸೂರು, ಏ.16- ಹಾಲಿ-ಮಾಜಿ ಸಿಎಂಗಳ ಚುನಾವಣಾ ಕಾದಾಟಕ್ಕೆ ವೇದಿಕೆಯಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ತಾರಕಕ್ಕೇರಿದ್ದು, ಜೆಡಿಎಸ್‍ನ ಪ್ರಚಾರ ಮುಗಿಯುತ್ತಿದ್ದಂತೆ ಕಾಂಗ್ರೆಸ್‍ನ ಪ್ರಚಾರದ ಆರ್ಭಟ ಆರಂಭವಾಗಿದೆ.
ಈಗಾಗಲೇ ಎರಡು ಬಾರಿ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಅಧಿಕೃತವಾಗಿ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಚಾರ ಆರಂಭಿಸಿದ್ದು, ನಾಲ್ಕು ದಿನಗಳ ಕಾಲ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿರುವುದರಿಂದ ಎಲ್ಲೆಡೆ ಬಿರುಸಿನ ಪ್ರಚಾರ ಗರಿಗೆದರಿದೆ.
ಕಳೆದ ಮೂರು ದಿನಗಳಿಂದ ಮಾಜಿ ಮುಖ್ಯಮಂತ್ರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತಬೇಟೆ ನಡೆಸಿದ್ದಾರೆ. ಇಂದಿನಿಂದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ದಿನಗಳ ಕಾಲ ಮೈಸೂರಿನಲ್ಲಿ ಮೊಕ್ಕಾಂ ಹೂಡಿರುವುದರಿಂದ ಪ್ರಚಾರ ಕಾರ್ಯ ರಂಗೇರಿದೆ.
ಚುನಾವಣಾ ಟಿಕೆಟ್ ಘೋಷಣೆ ನಂತರ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಚುನಾವಣಾ ಪ್ರಚಾರ ಆರಂಭಿಸಿರುವ ಅವರು, ಇಂದು ಮತ್ತು ನಾಳೆ ತಾವು ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡು ದಿನಗಳು ಪ್ರವಾಸ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಕುಮಾರಸ್ವಾಮಿ ಕಳೆದೆರಡು ದಿನಗಳಿಂದ ಸುತ್ತಿಬಂದ ಗ್ರಾಮಗಳೂ ಸೇರಿದಂತೆ ಇನ್ನಿತರ ಗ್ರಾಮಗಳಲ್ಲೂ ಸಿಎಂ ಮತಬೇಟೆಗೆ ತೆರಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಲಿದ್ದಾರೆ.
ನಾಲ್ಕು ದಿನಗಳಲ್ಲಿ ಎರಡು ದಿನಗಳು ತಮ್ಮ ಪುತ್ರ ಯತೀಂದ್ರ ಸ್ಪರ್ಧಿಸುವ ವರುಣ ಕ್ಷೇತ್ರದಲ್ಲಿ ಮತ ಯಾಚಿಸಲಿದ್ದು, ಮಗನನ್ನು ಗೆಲ್ಲಿಸುವಂತೆ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಲಿರುವ ಅವರು, ಇಂದಿನಿಂದ ಮೂರನೆ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ ಪ್ರಚಾರ ಆರಂಭಿಸಿರುವುದರಿಂದ ಪ್ರಚಾರ ಕಾರ್ಯ ಎಲ್ಲೆಡೆ ಅಲೆ ಎಬ್ಬಿಸಿದೆ.
ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರವಲ್ಲದೆ ಬಾದಾಮಯಿಂದಲೂ ಸ್ಪರ್ಧಿಸುತ್ತಾರೆ ಎಂಬ ಊಹಾಪೆÇೀಹವಿತ್ತು. ಆದರೆ, ಟಿಕೆಟ್ ಘೋಷಣೆ ನಂತರ ಈ ಎಲ್ಲ ಊಹಾಪೆÇೀಹಗಳಿಗೆ ತೆರೆ ಎಳೆದಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದ್ದಾರೆ.
ಹಾಗಾಗಿ ಸಿಎಂ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರ ಹಾಲಿ-ಮಾಜಿ ಸಿಎಂಗಳ ಪ್ರತಿಷ್ಠೆಯ ಕಣವಾಗಿರುವ ಜತೆಗೆ ಪ್ರಚಾರದ ಭರಾಟೆಯೂ ತೀವ್ರಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ