ಬೆಂಗಳೂರು, ಏ.16- ನಾಳೆ 11 ಗಂಟೆಯಿಂದ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
ಚುನಾವಣೆ ಕುರಿತಂತೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ ನಂತರ ನಾಮಪತ್ರ ಸಲ್ಲಿಸಬಹುದಾಗಿದೆ ಎಂದರು.
ನಾಮಪತ್ರ ಸಲ್ಲಿಸುವ ಕಚೇರಿಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ 3 ವಾಹನಗಳನ್ನು ಮಾತ್ರ ಬಳಸಬೇಕು. ಅಭ್ಯರ್ಥಿಗಳ ಜತೆ ನಾಲ್ವರು ಮಾತ್ರ ಇರಬೇಕು. ಅಭ್ಯರ್ಥಿಯೂ ಸೇರಿ ಒಟ್ಟು 5 ಮಂದಿ ಕಚೇರಿಗೆ ನಾಮಪತ್ರ ಸಲ್ಲಿಸಲು ಬರಬೇಕು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ವಿಡಿಯೋ ಮಾಡುವುದರಿಂದ ಎಲ್ಲರೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ನಾಮಪತ್ರದ ನಮೂನೆಯನ್ನು ಭರ್ತಿ ಮಾಡಬೇಕು. ಒಬ್ಬ ಅಭ್ಯರ್ಥಿಗೆ ಒಬ್ಬರು ಅನುಮೋದಕರಿರಬೇಕು. ಜತೆಗೆ ಎರಡು ಅಫಿಡವಿಟ್ಗಳನ್ನು ಸಲ್ಲಿಸಬೇಕಿದ್ದು, ಒಂದು ಅಫಿಡವಿಟ್ನಲ್ಲಿ ಪತ್ನಿ ಮತ್ತು ಮಕ್ಕಳ ವಿವರ ಹಾಗೂ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಅದನ್ನು 20ರೂ. ಸ್ಟ್ಯಾಂಪ್ ಪೇಪರ್ನಲ್ಲಿ ಒದಗಿಸಬೇಕು. ಅದಕ್ಕೆ ಮ್ಯಾಜಿಸ್ಟ್ರೇಟ್ ಅಥವಾ ನೋಟರಿಯಿಂದ ನೋಂದಣಿ ಮಾಡಿಸಿರಬೇಕು ಎಂದು ವಿವರಿಸಿದರು.
ನಾಮಪತ್ರದಲ್ಲಿನ ಒಂದೇ ಒಂದು ಕಾಲಂಅನ್ನು ಖಾಲಿ ಬಿಟ್ಟಿರಬಾರದು. ಆ ರೀತಿ ಖಾಲಿ ಇದ್ದರೆ ನಾಮಪತ್ರ ಅಂಗೀಕಾರವಾಗದೆ ತಿರಸ್ಕøತವಾಗಲಿದೆ.
ಈ ಹಿಂದೆ ಅಭ್ಯರ್ಥಿಗಳು ಸರ್ಕಾರಿ ವಸತಿ ಸೌಲಭ್ಯ ಪಡೆದುಕೊಂಡಿದ್ದರೆ ಅಂತಹ ವಸತಿಗಳ ಬಾಡಿಗೆ, ನೀರು ಹಾಗೂ ವಿದ್ಯುತ್ ಬಿಲ್ಗಳನ್ನು ಪಾವತಿಸಿರುವ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕು.
ಓರ್ವ ಸಾಮಾನ್ಯ ಅಭ್ಯರ್ಥಿ 10 ಸಾವಿರ ರೂ.ಗಳನ್ನು ಡಿಪಾಸಿಟ್ ಮಾಡಬೇಕಿದ್ದು, ಎಸ್ಸಿ/ಎಸ್ಟಿ ಅಭ್ಯರ್ಥಿಗಳು 5 ಸಾವಿರ ರೂ. ಡಿಪಾಸಿಟ್ ಮಾಡಬೇಕು. ಇದರೊಂದಿಗೆ ಎಸ್ಸಿ/ಎಸ್ಟಿಯವರು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಪ್ರತಿ ಅಭ್ಯರ್ಥಿಯೂ ಚುನಾವಣಾಧಿಕಾರಿಗಳ ಸಮ್ಮುಖದಲ್ಲೇ ನಾಮಪತ್ರ ಸಲ್ಲಿಸಿ ಪ್ರಮಾಣ ವಚನ ಸ್ವೀಕರಿಸಬೇಕು. ಇಲ್ಲದಿದ್ದರೆ ನಾಮಪತ್ರ ತಿರಸ್ಕøತವಾಗುತ್ತದೆ ಎಂದು ಮಾಹಿತಿ ನೀಡಿದರು.
ಆಯಾ ಪಕ್ಷಗಳಿಂದ ಸಿಗುವ ಬಿ ಫಾರಂ ಪಡೆದ ಅಭ್ಯರ್ಥಿಗಳು ಎರಡು ಚೆಕ್ಗಳನ್ನು ಸಲ್ಲಿಸಬೇಕು. ಯಾವುದೇ ಫಾರಂಗಳನ್ನು ಜರಾಕ್ಸ್ ಪ್ರತಿಯಲ್ಲಿ ಸಲ್ಲಿಸಬಾರದು. ಬೆಳಗ್ಗೆ 11 ರಿಂದ 3 ಗಂಟೆಯೊಳಗೆ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಎರಡು ನಿಮಿಷ ವ್ಯತ್ಯಾಸವಾದರೂ ನಾಮಪತ್ರ ಸ್ವೀಕರಿಸುವುದಿಲ್ಲ.
ಪ್ರತಿಯೊಬ್ಬರೂ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹೊಸ ಬ್ಯಾಂಕ್ ಅಕೌಂಟ್ವೊಂದರ ನಂಬರ್ ಕೊಡಬೇಕಿದ್ದು, ಚುನಾವಣಾ ವೆಚ್ಚದ 28 ಲಕ್ಷ ರೂ.ಗಳ ವ್ಯವಹಾರವನ್ನು ಈ ಅಕೌಂಟ್ ಮೂಲಕವೇ ನಡೆಸಬೇಕು. ನಾಮಪತ್ರದಲ್ಲಿ ಸಣ್ಣಪುಟ್ಟ ತಪ್ಪುಗಳೇನಾದರೂ ಇದ್ದರೆ ಅದನ್ನು ಸರಿಪಡಿಸಲು ಸಲಹೆ ನೀಡಲಾಗುತ್ತದೆ. ಹೆಸರು, ಸ್ಥಳ ಮತ್ತಿತರ ಕಾಲಂಗಳಲ್ಲಿನ ಸ್ಪೆಲಿಂಗ್ ಮಿಸ್ಟೇಕ್ ಕಂಡುಬಂದಲ್ಲಿ ಅಲ್ಲೇ ಸರಿಪಡಿಸಲು ಸೂಚಿಸಲಾಗುವುದು. ಅದನ್ನು ಸರಿಪಡಿಸಿ ಅವಧಿ ಪೂರ್ಣಗೊಳ್ಳುವುದರೊಳಗೆ ಅದೇ ನಾಮಪತ್ರ ಹಿಂದಿರುಗಿಸಬೇಕು. ಆಗ ಮಾತ್ರ ನಾಮಪತ್ರ ಅಂಗೀಕೃತವಾಗುತ್ತದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳು ಮತದಾರರ ಚೀಟಿಯನ್ನು ಕೊಡಬಹುದೇ ಎಂದು ಕೇಳಿವೆ. ಆದರೆ, ಯಾವುದೇ ಪಕ್ಷದ ಚಿಹ್ನೆ ಬಳಸದೆ ಮತದಾರರ ಚೀಟಿಯನ್ನು ಕೊಡಬೇಕು ಎಂದರು.
ರಜಾ ದಿನಗಳಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇರುವುದಿಲ್ಲ. ಭಾನುವಾರ ಹಾಗೂ ಇದೇ 18ರಂದು ಬಸವ ಜಯಂತಿ ನಿಮಿತ್ತ ರಜಾ ಇರುವುದರಿಂದ ನಾಮಪತ್ರ ಸಲ್ಲಿಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅತ್ಯಾಧುನಿಕ ಇವಿಎಂ ಬಳಕೆ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕವಾಗಿರುವ ಮಾರ್ಕ್-3, ಇವಿಎಂ ಯಂತ್ರವನ್ನು ಬೆಂಗಳೂರಿನಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಇದುವರೆಗೂ ನಡೆದ ಚುನಾವಣೆಗಳಲ್ಲಿ ಮಾರ್ಕ್-1 ಮತ್ತು ಮಾರ್ಕ್-2 ಎಂಬ ಇವಿಎಂಗಳನ್ನು ಬಳಸಲಾಗುತ್ತಿತ್ತು. ಈ ಇವಿಎಂಗಳಲ್ಲಿ 16 ರಿಂದ 64 ಅಭ್ಯರ್ಥಿಗಳ ಹೆಸರು ಮಾತ್ರ ಸೇರ್ಪಡೆ ಮಾಡಲು ಸಾಧ್ಯವಿತ್ತು. ಆದರೆ, ಈ ಅತ್ಯಾಧುನಿಕ ಮಾರ್ಕ್-3 ಇವಿಎಂನಲ್ಲಿ 324 ಅಭ್ಯರ್ಥಿಗಳ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ.
ಬೆಂಗಳೂರಿಗೆ 3250 ಯಂತ್ರಗಳ ಅವಶ್ಯಕತೆಯಿದ್ದು, ಶೇ.20ರಷ್ಟು ಹೆಚ್ಚಿನ ಯಂತ್ರಗಳನ್ನು ಒದಗಿಸಬೇಕಾಗಿರುವುದರಿಂದ ಒಟ್ಟು 5000 ಯಂತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಯಾವ ಕ್ಷೇತ್ರದಲ್ಲಿ ಯಾವ ಚುನಾವಣಾಧಿಕಾರಿಗಳು ಇರುತ್ತಾರೆ ಎಂಬೆಲ್ಲ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಂತೆ ಮನವಿ ಮಾಡಿದರು.