ಶ್ರವಣಬೆಳಗೊಳ, ಏ.16-ಸುಮಾರು 25 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯಲ್ಲಿ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಹಿರಿಸಾವೆ ಹೋಬಳಿ ಅಂತನಹಳ್ಳಿಯ ಕೆಂಪೇಗೌಡರಿಗೆ ಈ ಬಾರಿ ಬಿಜೆಪಿ ಪಕ್ಷದಿಂದ ಟಿಕೆಟ್ ದೊರೆತರೆ ಕ್ಷೇತ್ರದಲ್ಲಿ ಗೆಲುವು ಖಚಿತ ಎಂಬುದು ಇಲ್ಲಿನ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಮಾಜಿ ಶಾಸಕರಾದ ಎಂ.ಗಂಗಾಧರ್ ಅವರ ನಿಕಟವರ್ತಿಯಾಗಿರುವ ಇವರು, ಹೇಮಾವತಿ ಸಕ್ಕರೆ ಕಾರ್ಖಾನೆ ನಿರ್ಮಾಣ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಪಕ್ಷ ಸಂಘಟನೆಯಲ್ಲಿ ದಿವಂಗತ ಬಿ.ಬಿ.ಶಿವಪ್ಪನವರ ಅನುಯಾಯಿ, ವಿವಿಧ ಜನಪರ ಕಾರ್ಯಕ್ರಮಗಳು, ರೈತರ ಹೋರಾಟ, ರೈತರ ಸಮಸ್ಯೆಗಳ ಪರಿಹಾರದಲ್ಲಿ ಮುಂದಾಳತ್ವ, ಆದಿಚುಂಚನಗಿರಿ ಶ್ರೀಗಳ ವನಸಂವರ್ಧನ ಯೋಜನೆಯಲ್ಲಿ ಸಸಿ ನೆಡುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿರುವುದು, ಸೂಪರ್ ಕಂಪ್ಯೂಟರ್ ತರಬೇತಿ ಕೇಂದ್ರ ನಡೆಸುತ್ತಿರುವುದಲ್ಲದೆ,ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದು, ಇವರನ್ನು ಪ್ಟರಿಗಣಿಸಿ ಪಕ್ಷ ಟಿಕೆಟ್ ನೀಡಿದರೆ ಇಲ್ಲಿ ಬಿಜೆಪಿ ಗೆಲುವು ಸುಲಭ ಎಂಬುದು ಇಲ್ಲಿನ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಬಾಲಬ್ರಹ್ಮಾನಂದ ಸ್ವಾಮೀಜಿ ಪರದೇಶ ಕೇಂದ್ರ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಮಹದೇವ ದೇಸಾಯಿ, ಕಾಲಭೆರವ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೇವೆ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಆರೋಗ್ಯ ಶಿಬಿರ, ಉದ್ಯೋಗಮೇಳಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿರುವ ಇವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ಕ್ಷೇತ್ರದ ಜನರ ಒತ್ತಾಸೆಯಾಗಿದೆ.
ಶ್ರವಣಬೆಳಗೊಳ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಇನ್ನೂ ಹಲವು ಸ್ಪರ್ಧಾಕಾಂಕ್ಷಿಗಳಿಗೂ ಎ.ಎಸ್.ಕೆಂಪೇಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಎಲ್ಲಾ ಪಕ್ಷದ ಮುಖಂಡರ ಒಲವು ಗಳಿಸಿದ್ದು, ಇವರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಿಜೆಪಿ 17 ರಂದು ತನ್ನ ಅಂತಿಮ ಪಟ್ಟಿ ಪ್ರಕಟಿಸಲಿದ್ದು, ಅದರಲ್ಲಿ ಇವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿರುವುದು ತಿಳಿದುಬಂದಿದೆ.
ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ಕೆಂಪೇಗೌಡ ಅವರು ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಕಾರ್ಯಕರ್ತರ ಅಪಾರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಇವರಿಗೆ ಪಕ್ಷ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಗೆಲುವಿಗೆ ಮತ್ತು ಪಕ್ಷದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.