ಬೆಂಗಳೂರು, ಏ.16- ಕಾಂಗ್ರೆಸ್ ಬಂಡಾಯದ ಬೆಂಕಿ ಆರಿಲ್ಲ. ವಿಧಾನಸಭೆ ಚುನಾವಣೆಗೆ ಏಕಕಾಲದಲ್ಲಿ 218 ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ ಕಾಂಗ್ರೆಸ್ ಪ್ರಕಟಿಸುತ್ತಿದ್ದಂತೆ ಬಂಡಾಯ ಭುಗಿಲೆದ್ದಿದ್ದು, ರಾಜ್ಯದ ವಿವಿಧೆಡೆ ಪ್ರತಿಭಟನೆ, ಆಕ್ರೋಶ, ಆತ್ಮಹತ್ಯೆಗೆ ಪ್ರಯತ್ನದಂತಹ ಘಟನೆಗಳು ನಡೆದಿದ್ದು, ಇಂದು ಕೂಡ ಬಂಡಾಯದ ಕಾವು ಜೋರಾಗಿತ್ತು.
ಅತೃಪ್ತರನ್ನು ಮನವೊಲಿಸುವ ಪ್ರಯತ್ನಗಳು ನಡೆದ ನಡುವೆಯೇ ಹಲವು ಕ್ಷೇತ್ರಗಳಲ್ಲಿ ಆಕ್ರೋಶಭರಿತರು ಪ್ರತಿಭಟನೆ ನಡೆಸಿ, ಟಯರ್‍ಗಳಿಗೆ ಬೆಂಕಿ ಹಚ್ಚಿ ತಮ್ಮ ಅಸಮಾಧಾನ ಹೊರಹಾಕಿದರು.
ಪಟ್ಟಿ ಬಿಡುಗಡೆಗೂ ಮುನ್ನ ನಿನ್ನೆ ಹಲವೆಡೆ ಪ್ರತಿಭಟನೆ, ರಸ್ತೆತಡೆ ನಡೆದಿದ್ದವು. ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಟಿಕೆಟ್ ವಂಚಿತ ಅಭ್ಯರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದರು. ಇಂದೂ ಕೂಡ ಪ್ರತಿಭಟನೆ, ಬಂಡಾಯದ ಕಾವು ಜೋರಾಗಿತ್ತು.
ಕೆಪಿಸಿಸಿ ಕಚೇರಿ ಎದುರು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ನಿವಾಸ, ಜಿಲ್ಲಾ ಕಾಂಗ್ರೆಸ್ ಕಚೇರಿ ಸೇರಿದಂತೆ ಹಲವೆಡೆ ಅತೃಪ್ತರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.
ತಿಪಟೂರಿನಲ್ಲಿ ಶಾಸಕ ಷಡಕ್ಷರಿ ಅವರಿಗೆ ಟಿಕೆಟ್ ಕೈ ತಪ್ಪಿದ್ದನ್ನು ವಿರೋಧಿಸಿ ಅವರ ಬೆಂಬಲಿಗರು ಇಂದು ಬೆಳಗ್ಗೆ ತಿಪಟೂರು ಟೌನ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನೆಲಮಂಗಲದಲ್ಲಿ ಮಾಜಿ ಸಚಿವ ಅಂಜನಮೂರ್ತಿ ಅವರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಹೈವೆ ಬಂದ್ ಮಾಡಿ ಟಯರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ತುಮಕೂರು ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ಕಾವು ಜೋರಾಗಿತ್ತು. ರಸ್ತೆಯುದ್ದಕ್ಕೂ ಟಯರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರಿಂದ 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಚಿಕ್ಕಮಗಳೂರಿನಲ್ಲಿ ಗಾಯತ್ರಿ ಶಾಂತೇಗೌಡ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ ಅವರ ಬೆಂಬಲಿಗರು ಕಾಂಗ್ರೆಸ್ ಕಚೇರಿಯಲ್ಲಿ ಕುರ್ಚಿಗಳನ್ನೆಲ್ಲ ಎಸೆದು ನಾಯಕರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಕ್ಷೇತ್ರದಿಂದ ಅಂಬರೀಶ್‍ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಹಲವರು ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಚೇರಿಗೆ ನುಗ್ಗಿ ಮೇಜು-ಕುರ್ಚಿಗಳನ್ನು ಒಡೆದು ಹಾಕಿ ದಾಂಧಲೆ ಕೂಡ ಮಾಡಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಮಾಡಿ ಪ್ರತಿಭಟಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕು ಶಾಸಕ ಬಿ.ಎಂ.ನಾಗರಾಜ್ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರ ಬೆಂಬಲಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಪ್ರತಿಕೃತಿ ದಹನ ಮಾಡಿದರು.
ಶಿರಗುಪ್ಪ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮೆರವಣಿಗೆ ಮಾಡಿ ನಾಗರಾಜ್ ಅವರಿಗೇ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ಬಾದಾಮಿಯಲ್ಲಿ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಸಚಿವ ಎಸ್.ಆರ್.ಪಾಟೀಲ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಉಡುಪಿ, ಕಾರ್ಕಳ, ಮುಧೋಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮ್ಮ ನಾಯಕರಿಗೆ ಟಿಕೆಟ್ ತಪ್ಪಿದ್ದಕ್ಕೆ ತೀವ್ರ ಆಕ್ರೋಶ ಹೊರಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿರುದ್ಧ ಘೋಷಣೆ ಕೂಗಿದರು.
ಇತ್ತ ಬೆಂಗಳೂರಿನಲ್ಲಿ ಪ್ರತಿಭಟನೆ ಕಾವು ಜೋರಾಗಿತ್ತು. ಮಹಾಲಕ್ಷ್ಮಿ ಲೇಔಟ್‍ನಲ್ಲಿ ಎನ್‍ಎಸ್‍ಯುಐ ಅಧ್ಯಕ್ಷ ಮಂಜುನಾಥ್‍ಗೌಡ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಅಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಗಿರೀಶ್ ಕೆ.ನಾಶಿ ಅವರು ಪ್ರತಿಭಟನೆ ನಡೆಸಿ ನನಗೇ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರಾಜಾಜಿನಗರ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುಳಾ ನಾಯ್ಡು, ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ನನ್ನನ್ನು ಕಡೆಗಣಿಸಿ ಮಾಜಿ ಮೇಯರ್ ಪದ್ಮಾವತಿ ಅವರಿಗೆ ಟಿಕೆಟ್ ನೀಡಲಾಗಿದೆ. ನನಗೆ ಟಿಕೆಟ್ ನೀಡದಿದ್ದರೆ ಪರ್ಯಾಯ ಚಿಂತನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಇನ್ನು ಟಿಕೆಟ್ ಘೋಷಣೆಯಾಗದ ಶಾಂತಿನಗರ ಕ್ಷೇತ್ರದಿಂದ ಹಲವು ಮುಖಂಡರು ಇಂದು ಬೆಳಗ್ಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತರಿಕೆರೆಯಲ್ಲಿ ಹಾಲಿ ಶಾಸಕ ಶ್ರೀನಿವಾಸ್ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಶಾಸಕರ ಪತ್ನಿ ಮತ್ತು ಬೆಂಬಲಿಗರು ನಿನ್ನೆ ಪ್ರತಿಭಟನೆ ನಡೆಸಿದ್ದು, ಇಂದು ಕೂಡ ಪ್ರತಿಭಟನೆ ಮುಂದುವರಿಸಿದ್ದರು.
ಮುಧೋಳದಲ್ಲಿ ಆರ್.ಬಿ.ತಿಮ್ಮಾಪುರ್ ಅವರ ಬೆಂಬಲಿಗರು ರನ್ನ ವೃತ್ತದಲ್ಲಿ ಟಯರ್‍ಗಳನ್ನು ಸುಟ್ಟು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಕಲಬುರಗಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಕೃಷ್ಣ ಜಿ.ಕುಲಕರ್ಣಿ ಹಾಗೂ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಅವರು, ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಚಿಕ್ಕೋಡಿ, ಅಥಣಿ ಮತಕ್ಷೇತ್ರದ ಕಾಂಗ್ರೆಸ್‍ನಲ್ಲೂ ಕೂಡ ಭಿನ್ನಮತ ಭುಗಿಲೆದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸದಾಶಿವ ಬುಟಾಳಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ವಲಸೆ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ಟಿಕೆಟ್ ಹಂಚಿಕೆಯಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ಅವರ ಬೆಂಬಲಿಗರು ಮನೋಹರ್‍ಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ಇನ್ನೂ ಹಲವೆಡೆ ಪ್ರತಿಭಟನೆ, ರಸ್ತೆ ತಡೆ ನಡೆದಿದೆ. ಕಾಂಗ್ರೆಸ್ ನಾಯಕರು ಬಂಡಾಯ ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಗೆಲ್ಲುವ ಮಾನದಂಡವನ್ನು ಅನುಸರಿಸಿ ಟಿಕೆಟ್ ನೀಡಲಾಗಿದೆ. ಸಮೀಕ್ಷೆ ಆಧರಿಸಿ ಜಿಲ್ಲೆ, ತಾಲೂಕು, ಎಲ್ಲ ಕಾಂಗ್ರೆಸ್ ಮುಖಂಡರಿಂದ ಮಾಹಿತಿ ಪಡೆದು ಟಿಕೆಟ್ ನೀಡಲಾಗಿದೆ. ಯಾವುದೇ ರೀತಿಯ ಗೊಂದಲಗಳಿಲ್ಲ. ಎಲ್ಲವೂ ಬಗೆಹರಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.