ಬೆಂಗಳೂರು, ಏ.16-ಟಿಕೆಟ್ ಹಂಚಿಕೆ ಬೆನ್ನಲ್ಲೇ ಎದುರಾಗಿರುವ ಭಿನ್ನಮತವನ್ನು ತಣಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವರು ಟಿಕೆಟ್ ವಂಚಿತರ ಜೊತೆ ಸಂಧಾನ ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.
ಹಾಲಿ ಶಾಸಕರ ಪೈಕಿ ಬಾದಾಮಿಯ ಚಿಮ್ಮನಕಟ್ಟಿ, ಕಿತ್ತೂರಿನ ಷಡಕ್ಷರಿ, ಬ್ಯಾಡಗಿಯ ಬಸವರಾಜ ಶಿವಣ್ಣನವರ್, ಮಾಯಕೊಂಡ ಕ್ಷೇತ್ರದ ಶಿವಮೂರ್ತಿ ಅವರು ಸೇರಿದಂತೆ ಆರು ಕ್ಷೇತ್ರದ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು, ಬಂಡಾಯ ಭುಗಿಲೆದ್ದಿದೆ.
ಒಂದೆಡೆ ಟಿಕೆಟ್ ವಂಚಿತ ಹಾಲಿ ಶಾಸಕರ ಬೆಂಬಲಿಗರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತಿದ್ದರೆ, ಟಿಕೆಟ್ ವಂಚಿತ ಆಕಾಂಕ್ಷಿಗಳ ಬೆಂಬಲಿಗರು ಕೆಪಿಸಿಸಿ ಕಚೇರಿ, ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ ಅವರ ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ವಲಸೆ ಬಂದ ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ನೀಡಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಬಸವರಾಜ್ ಶಿವಣ್ಣನವರ್ ಆರೋಪಿಸಿದ್ದಾರೆ.
ತಡರಾತ್ರಿ ಟಿಕೆಟ್ ಪ್ರಕಟಿಸಲಾಯಿತಾದರೂ ತಿಪಟೂರು ಮತ್ತು ಬಾದಾಮಿಯಲ್ಲಿ ರಾತ್ರೋರಾತ್ರಿ ಪ್ರತಿಭಟನೆಗಳು ಆರಂಭವಾದವು. ಕಿತ್ತೂರಿನಲ್ಲಿ ಷಡಕ್ಷರಿ ಬೆಂಬಲಿಗರು ಮಧ್ಯರಾತ್ರಿಯಲ್ಲೇ ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಾದಾಮಿಯಲ್ಲಿ ಬೆಂಬಗಲಿಗರು ಡಿ.ಬಿ.ಚಿಮ್ಮನಕಟ್ಟಿ ಮನೆ ಮುಂದೆ ರಾತ್ರಿ ಪೂರಾ ಜಮಾಯಿಸಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ನೆಲಮಂಗಲ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ್ದಕ್ಕಾಗಿ ಮಾಜಿ ಸಚಿವ ಅಂಜನಾಮೂರ್ತಿ ಬೆಂಬಲಿಗರು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್ ವಂಚಿತರ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇಂದು ಬೆಳಗ್ಗೆಯೇ ಮೈಸೂರು ಜಿಲ್ಲೆಯತ್ತ ಪ್ರಯಾಣ ಬೆಳೆಸಿದರು.
ಪರಮೇಶ್ವರ್ ಅವರಿಗೆ ಪ್ರತಿಭಟನೆಗಳ ಬಿಸಿ ತೀವ್ರವಾಗಿ ತಟ್ಟಲಾರಂಭಿಸಿದ್ದು, ಮುಖಂಡರ ಮನೆಗಳ ಮುಂದೆ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ಹೆಚ್ಚಿನ ಭದ್ರತೆ ಒದಗಿಸುವ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲಾಯಿತು.