ಮತದಾರರ ವೋಟುಗಳು ಕುಮಾರಸ್ವಾಮಿ ಜೇಬಿನಲ್ಲಿ ಇಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಏ.16-ಮತದಾರರ ವೋಟುಗಳು ಕುಮಾರಸ್ವಾಮಿ ಜೇಬಿನಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಮಾಡಿದರೂ ಜೆಡಿಎಸ್‍ನ್ನು ಸೋಲಿಸಲಾಗದು ಎಂದು ಎಚ್‍ಡಿಕೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರ ಜೇಬಿನಲ್ಲಿ ಮತಗಳಿಲ್ಲ ಎಂದರು.
ಮೊಯ್ಲಿ ವಿರುದ್ಧ ಅನಿತಾಕುಮಾರಸ್ವಾಮಿ ಸೋತಾಗ ಅವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರು ಗೆಲ್ಲಬೇಕು , ಯಾರು ಸೋಲಬೇಕು ಎಂಬುದನ್ನು ಜನ ತೀರ್ಮಾನಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಈ ಹಿಂದೆ ಚಾಮುಂಡೇಶ್ವರಿಯಲ್ಲಿ ನಾನು ಸ್ಪರ್ಧಿಸಿದಾಗ ಕುಮಾರಸ್ವಾಮಿ ಪ್ರಚಾರ ಮಾಡಿದ್ದರು.ಆಗಲೂ ಗೆದ್ದಿದ್ದು ನಾನೇ. ಈಗಲೂ ಅದೇ ರೀತಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಇದೇ ತಿಂಗಳ 20ಕ್ಕೆ ನಾನು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.
ಬಾದಾಮಿ ಮತ್ತು ಚಾಮುಂಡೇಶ್ವರಿಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಾದಾಮಿಯಲ್ಲಿ ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಎಷ್ಟು ಬಾರಿ ಸ್ಪರ್ಧಿಸಿದರೂ ಯಾವಾಗಲೂ ಎರಡು ಕ್ಷೇತ್ರಗಳಲ್ಲಿ ನಾನು ಸ್ಪರ್ಧೆ ಮಾಡಿಲ್ಲ. ಹಾಗಾಗಿ ಈ ಬಾಯಿಯೂ ನಾನು ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ ಎಂದು ಉತ್ತರಿಸಿದರು. ಅಲ್ಲದೆ ಚಾಮುಂಡೇಶ್ವರಿ ಕ್ಷೇತ್ರ ಹೇಗಿದೆ ಎಂದು ಪತ್ರಕರ್ತರನ್ನು ಮರುಪ್ರಶ್ನೆ ಕೇಳಿದರು.
ಚಾಮುಂಡೇಶ್ವರಿಯಲ್ಲಿ ತಮಗೆ ಮೋಕ್ಷ ಎಂಬ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಈ ರೀತಿ ಹೇಳಿಕೆ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್‍ಡಿಕೆಗೆ ಕಿವಿಮಾತು ಹೇಳಿದರು.
ಮನವೊಲಿಸುವೆ: ಮೈಸೂರಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಕೆಟ್ ವಂಚಿತರಾದ ಷಡಕ್ಷರಿ ಮತ್ತು ಬಿ.ಬಿ.ಚಿಮ್ಮನಕಟ್ಟಿ ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್‍ನಲ್ಲಿ ಯಾವುದೇ ಬಂಡಾಯ ಅಥವಾ ಭಿನ್ನಮತವಿಲ್ಲ. ಎಲ್ಲರೊಂದಿಗೆ ಚರ್ಚೆ ಮಾಡಿ ಮನವೊಲಿಸಲಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ