ಕಲಬುರಗಿ, ಏ.15-ವೀರಶೈವ-ಲಿಂಗಾಯತರ ಕಾಳಗ ತಾರಕಕ್ಕೇರಿದೆ. ಮಾತೆ ಮಹಾದೇವಿ ಅವರು ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸಲಿ, ಅವರ ವಿರುದ್ಧ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಒಂದು ವೇಳೆ ಅವರು ಸೋತರೆ ಪೀಠ ತ್ಯಾಗ ಮಾಡಬೇಕೆಂದು ವೀರಶೈವ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ಗೆ ಬೆಂಬಲ ನೀಡಬೇಕೆಂದು ಬಸವ ಪೀಠಾಧ್ಯಕ್ಷರಾದ ಮಾತೆ ಮಹಾದೇವಿ ಕರೆ ನೀಡಿದ್ದನ್ನು ತೀವ್ರವಾಗಿ ಖಂಡಿಸಿರುವ ನರಿಬೋಳ ಅವರು, ಮಾತೆ ಮಹಾದೇವಿ ಅವರು ಬೇಕಾದರೆ ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸಲಿ. ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ನಾವು ಸೋತರೆ ಜೀವನಪೂರ್ತಿ ಅವರ ಅಡಿಯಾಳಾಗಿ ಸೇವೆ ಸಲ್ಲಿಸುತ್ತೇವೆ. ಅವರು ಸೋತರೆ ಕಾವಿ ಕಳಚಿಟ್ಟು ಪೀಠ ತ್ಯಾಗ ಮಾಡಲು ಸಿದ್ಧರಾಗಬೇಕೆಂದು ಸವಾಲು ಹಾಕಿದರು.
ವೀರಶೈವ ಲಿಂಗಾಯತರು ಒಂದೇ ಎಂಬುದು ನಮ್ಮ ನಿಲುವು. ಆದರೆ ಮಾತೆ ಮಹಾದೇವಿ ಅವರು ಧರ್ಮ ಒಡೆಯುವವರ ಜೊತೆ ಕೈ ಜೋಡಿಸಿದ್ದಾರೆ. ಹಾಗಾಗಿ ಅವರು ಆ ಪಕ್ಷದಿಂದಲೇ ಚುನಾವಣೆಗೆ ನಿಲ್ಲುವುದು ಸೂಕ್ತ. ಅವರಿಗೆ ಧರ್ಮಕ್ಕಿಂತ ರಾಜಕೀಯವೇ ಹೆಚ್ಚಾದಂತೆ ಕಾಣುತ್ತದೆ ಎಂದು ಅವರು ಹೇಳಿದರು.