ನವದೆಹಲಿ, ಏ.15-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ವಿರುದ್ಧ ದೌರ್ಜನ್ಯಗಳನ್ನು ಎಸಗುವವರ ಬಂಧನ ತಡೆ ಕುರಿತು ಸುಪ್ರೀಂಕೋರ್ಟ್ ಜಾರಿಗೊಳಿಸಿರುವ ಹೊಸ ಮಾರ್ಗಸೂಚಿಗಳ ಬಗ್ಗೆ ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿ ಜಟಾಪಟಿಗೆ ಕಾರಣವಾಗಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆಯ ಮೂಲ ನಿಯಮಗಳನ್ನು ಉಳಿಸಿಕೊಳ್ಳಲು ಕೇಂದ್ರ ಕಸರತ್ತು ಮುಂದುವರಿಸಿದೆ.
ಒಂದೆಡೆ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಬೇಕಾದ, ಇನ್ನೊಂದೆಡೆ ದಲಿತರ ಹಿತರಕ್ಷಿಸಬೇಕಾದ ಹಾಗೂ ಮತ್ತೊಂದೆಡೆ ಈ ಕಾಯ್ದೆಯ ದುರ್ಬಳಕೆಯಿಂದ ಬಾಧಿತರಾಗುವವರನ್ನು ರಕ್ಷಿಸಬೇಕಾದ ಅನಿವಾರ್ಯತೆಗಳಲ್ಲಿ ಕೇಂದ್ರ ಸರ್ಕಾರ ಸಿಲುಕಿದೆ.
ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರವು ಕಾಯ್ದೆಯ ಮೂಲ ನಿಯಮಗಳನ್ನು ಉಳಿಸಿಕೊಳ್ಳಲು ಸುಗ್ರೀವಾಜ್ಞೆ ಜಾರಿಗೊಳಿಸುವುದೂ ಸೇರಿದಂತೆ ಸಾಧ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಕಾರ್ಯೋನ್ಮುಖವಾಗಿದೆ.
ಕಾಯ್ದೆಯ ಮೂಲ ನಿಯಮಗಳನ್ನು ರಕ್ಷಿಸಲು ಸುಗ್ರೀವಾಜ್ಞೆ ಹೊರಡಿಸುವುದರಿಂದ ಈಗ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸಬಹುದಾಗಿದೆ ಎಂದು ಕೆಲವು ಕಾನೂನು ತಜ್ಞರು ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.
ಈ ಕಾಯ್ದೆಯನ್ನು ವಿರೋಧಿಸಿ ಇತ್ತೀಚೆಗೆ ನಡೆದ ಭಾರತ್ ಬಂದ್ ವೇಳೆ ದೇಶದ ವಿವಿಧೆಡೆ ಹಿಂಸಾಚಾರ ಭುಗಿಲೆದ್ದು ಸಾವು-ನೋವು ಹಾಗೂ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ, ಎಚ್ಚರಿಕೆ ಹೆಜ್ಜೆ ಮೂಲಕ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಉದ್ದೇಶಿಸಿದೆ.