ಬೈರುತ್/ವಾಷಿಂಗ್ಟನ್/ಮಾಸ್ಕೋ, ಏ.14-ರಾಸಾಯನಿಕ ಅಸ್ತ್ರಗಳನ್ನು ಬಳಸಿ ಮುಗ್ಧ ನಾಗರಿಕರ ಮಾರಣ ಹೋಮಕ್ಕೆ ಕಾರಣವಾಗಿದೆ ಎನ್ನಲಾದ ಸಿರಿಯಾ ವಿರುದ್ಧ ಇಂದು ಅಮೆರಿಕ ನೇತೃತ್ವದ ಮಿತ್ರಪಡೆಗಳು ಮಿಂಚಿನ ವಾಯು ದಾಳಿ ನಡೆಸಿವೆ. ಈ ದಾಳಿಯಿಂದಾಗಿ ಡಮಾಸ್ಕಸ್, ಬೈರುತ್ ಪಟ್ಟಣಗಳಲ್ಲಿ ಭಾರೀ ಸ್ಫೋಟದ ಶಬ್ಧಗಳು ಕೇಳಿ ಬಂದಿದ್ದು, ದಟ್ಟ ಹೊಗೆ ಆವರಿಸಿದೆ. ಮುಗಿಲೆತ್ತರದ ಬೆಂಕಿ ಜ್ವಾಲೆಗಳಿಂದ ಆಗಸ ಕಿತ್ತಳೆ ಬಣ್ಣಕ್ಕೆ ಪರಿವರ್ತಿತವಾಗಿವೆ.
ಇದೇ ವೇಳೆ ಅಮೆರಿಕದ ಆಕ್ರಮಣದ ವಿರುದ್ಧ ಕುಪಿತಗೊಂಡಿರುವ ರಷ್ಯಾ ಪ್ರತೀಕಾರದ ಬೆದರಿಕೆಯೊಡ್ಡಿದ್ದು, ಯುದ್ಧ ಸಾಧ್ಯತೆ ಕಾರ್ಮೋಡಗಳು ದಟ್ಟವಾಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸಾರ್ವಜನಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಸಿರಿಯಾ ಅಧ್ಯಕ್ಷ ಬಷರ್-ಅಲ್ ಅಸಾದ್ ನೇತೃತ್ವದ ಕ್ರಿಮಿನಲ್ ಆಡಳಿತದ ವಿರುದ್ಧ ಹಾಗೂ ರಾಸಾಯನಿಕ ಅಸ್ತ್ರ ಬಳಸಿರುವ ಆತನ ಸೇನಾಪಡೆ ವಿರುದ್ಧ ಅಮೆರಿಕ-ಬ್ರಿಟನ್-ಫ್ರಾನ್ಸ್ ನೇತೃತ್ವದ ಜಂಟಿ ಪಡೆಗಳು ವಾಯು ದಾಳಿ ನಡೆಸಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ನಲ್ಲಿ ಘೋಷಿಸಿದ ನಂತರ ಈ ಕಾರ್ಯಾಚರಣೆ ನಡೆದಿದೆ.
ಈ ದಾಳಿಯಿಂದ ಕುಪಿತಗೊಂಡಿರುವ ಸಿರಿಯಾ ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಗಳ ಉಲ್ಲಂಘನೆ. ಅಮೆರಿಕ ನೇತೃತ್ವದ ದಾಳಿಯನ್ನು ಹಿಮ್ಮೆಟ್ಟಿಸಲು ತಮ್ಮ ಸೇನೆ ಸಮರ್ಥವಾಗಿದೆ ಎಂದು ಸಿರಿಯಾ ಅಧ್ಯಕ್ಷರು ಹೇಳಿದ್ಧಾರೆ.
ಮುಂಜಾನೆ ಸಿರಿಯಾದ ಡಮಾಸ್ಕಸ್, ಬೈರುತ್ ಸೇರಿದಂತೆ ವಿವಿಧ ನಗರಗಳಲ್ಲಿ ಸೇನಾ ಪಡೆಗಳ ವಾಹನಗಳು ಗಸ್ತು ತಿರುಗುತ್ತಾ ಧ್ವನಿ ವರ್ಧಕಗಳಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸಿ ಜನರಲ್ಲಿ ನೈತಿಕ ಸ್ಥೈರ್ಯ ತುಂಬುತ್ತಿವೆ.
ರಷ್ಯಾ ಪ್ರತೀಕಾರದ ಎಚ್ಚರಿಕೆ : ಅಮೆರಿಕ ನೇತೃತ್ವದ ಸೇನಾ ದಾಳಿಯಿಂದ ಆಕ್ರೋಶಗೊಂಡಿರುವ ಸಿರಿಯಾ ಮಿತ್ರ ರಾಷ್ಟ್ರ ರಷ್ಯಾ. ಇದೊಂದು ಏಕಪಕ್ಷೀಯ ನಿರ್ಧಾರ ಕ್ರಮ ಮತ್ತು ಅಂತಾರಾಷ್ಟ್ರೀಯ ನಿಯಮ ಉಲ್ಲಂಘನೆಯಾಗಿದೆ. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುವ ಬದಲು ದಾಳಿ ನಡೆಸಿರುವುದು ಖಂಡನೀಯ. ಇದಕ್ಕೆ ರಷ್ಯಾ ಪ್ರತೀಕಾರದ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಈ ಎಲ್ಲ ಬೆಳವಣಿಗೆಗಳಿಂದ ಯುದ್ದದ ಆತಂಕ ಮನೆ ಮಾಡಿದ್ದು, ಶಾಂತಿ ಸ್ಥಾಪನೆಗಾಗಿ ವಿಶ್ವಸಂಸ್ಥೆ ಮುಂದಾಗಿದೆ.