ನವದೆಹಲಿ, ಏಪ್ರಿಲ್ 14-ಸಾಮಾಜಿಕ ಅಸಮತೋಲನದ ವಿರುದ್ಧ ಹೋರಾಡಿದ, ಜಾತ್ಯಾತೀತ ನಾಯಕ ಡಾ. ಭೀಮರಾವ್ ಅಂಬೇಡ್ಕರ್ ಅವರ 120ನೇ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಬಾಬಾ ಸಾಹೇಬರ ಕುರಿತು ಗುಣಗಾನ ಮಾಡಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಕಡುಬಡವ ಮತ್ತು ಸಾಧಾರಣ ವರ್ಗದ ಜನರಿಗೆ ಹೊಸ ಭರವಸೆ ಮೂಡಿಸಿದವರು. ಸಂವಿಧಾನ ನಿರ್ಮಿಸುವಲ್ಲಿ ಅವರು ನೀಡಿದ ಅನನ್ಯ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ನಾವು ಅವರ ಋಣದಲ್ಲಿದ್ದೇವೆ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಬಹುಮುಖಿ ವ್ಯಕ್ತಿತ್ವದ ಬಾಬಾ ಸಾಹೇಬ್ ಅವರು ಸೌಲಭ್ಯವಂಚಿತರಿಗೆ ಮತ್ತು ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಗುರಿಯೂ ಅವರ ಮನಸ್ಸಿನಲ್ಲಿತ್ತು. ಅಂಥ ಅಮೋಘ ವ್ಯಕ್ತಿಯ ಜನ್ಮದಿನದಂದು ಅವರಿಗೆ ನನ್ನ ನಮನ ಎಂದಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರ ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ . ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು ಶೋಷಿತ ವರ್ಗಕ್ಕೆ ನೀಡಿದ ಯುಗಪುರುಷ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಂದು ನಾನು ಅವರಿಗೆ ತಲೆಬಾಗುತ್ತೇನೆ. ಸಮಾಜದ ಬಡ ಮತ್ತು ಸಾಮಾನ್ಯ ವರ್ಗದ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಸಂವಿಧಾನ ಶಿಲ್ಪಿಗೆ ನನ್ನ ನಮನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.